ಪುತ್ತೂರು, ಎ17(Daijiworld News/SS): ಪುತ್ತೂರಿನಲ್ಲಿರುವ ಸ್ಟಾರ್ಟ್ಅಪ್ ಕಂಪನಿಯೊಂದು ಮತದಾನ ಮಾಡದಿದ್ದರೆ, ಒಂದು ತಿಂಗಳ ವೇತನ ನೀಡುವುದಿಲ್ಲ ಎಂದು ತನ್ನ ನೌಕರರಿಗೆ ಆದೇಶ ಹೊರಡಿಸಿದೆ.
ಪುತ್ತೂರಿನಲ್ಲಿ ಸ್ಥಾಪನೆಗೊಂಡ ‘ದ ವೆಬ್ ಪೀಪಲ್’ ಹೆಸರಿನ ಸ್ಟಾರ್ಟ್ಅಪ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕಂಪನಿ ಈ ವೇತನ ನಿರಾಕರಣೆಯ ದಿಟ್ಟ ಹೆಜ್ಜೆಗೆ ಮುಂದಾಗಿರುವ ಸಂಸ್ಥೆ.
ರಾಜ್ಯದಲ್ಲಿ ಏ.18 ಮತ್ತು 23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನೌಕರರು ಯಾವುದೇ ಕಾರಣಕ್ಕೂ ಮತದಾನ ಮಾಡದೇ ಉಳಿಯಬಾರದು ಎಂಬ ನಿಟ್ಟಿನಲ್ಲಿ ಈ ಕಂಪನಿಯ ಮುಖ್ಯಸ್ಥರು ತನ್ನ ನೌಕರರ ಸಭೆ ನಡೆಸಿ ಮತದಾನ ಮಾಡುವ ಪ್ರತಿಜ್ಞೆ ಮಾಡಿಸಿದ್ದಾರೆ. ಮಾತ್ರವಲ್ಲ, ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.
ಇಲ್ಲಿನ ‘ದ ವೆಬ್ ಪೀಪಲ್’ ಹೆಸರಿನ ಸ್ಟಾರ್ಟ್ಅಪ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕಂಪನಿಯಲ್ಲಿ 25 ಮಂದಿ ನೌಕರರಿದ್ದಾರೆ. ಇವರೆಲ್ಲರೂ ಮತದಾನದ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ನೌಕರರಿಗೆ ಮತದಾನಕ್ಕೆ ಹೋಗಿಬರಲು ವೇತನ ಸಹಿತ ಎರಡು ದಿನ ರಜೆ ನೀಡಲೂ ಸಂಸ್ಥೆ ನಿರ್ಧರಿಸಿದೆ. ಮತದಾನ ಮುಗಿಸಿ ಬಂದ ಬಳಿಕ ಮತದಾನ ಮಾಡಿದ ಬಗ್ಗೆ ಬೆರಳಿನಲ್ಲಿ ಶಾಯಿ ಗುರುತನ್ನು ತೋರಿಸಬೇಕು. ಇಲ್ಲದಿದ್ದರೆ, ಒಂದು ತಿಂಗಳ ವೇತನವೇ ಕಟ್ ಎಂದು ಹೇಳಿದೆ.
ಹಲವೆಡೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಈ ಮೂಲಕ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಆಶಯವನ್ನು ಈ ಕಂಪನಿ ವ್ಯಕ್ತಪಡಿಸಿದೆ.