ಕುಂದಾಪುರ, ನ 24 (DaijiworldNews/MS): ಭಾರತ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಸತ್ ಚಿಂತನೆ, ಸದಾಚಾರಯುಕ್ತ ಸಂಸ್ಕಾರ ವಿಕಾಸನಗೊಳ್ಳುತ್ತದೆ. ನಾಯಕತ್ವದ ಗುಣ, ನಮ್ಮನ್ನು ಸಮಾಜದ ಮುಂದೆ ತೋರ್ಪಡಿಸುವ ವ್ಯಕ್ತಿತ್ವ ಇದರಿಂದ ಬೆಳೆಯುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ನ ಕೊಡುಗೆ ದೊಡ್ಡದು ಎಂದು ಶ್ರೀ ವಿನಾಯಕ ಸಭಾಗೃಹ ಮುಖ್ಯಸ್ಥರಾದ ರವಿರಾಜ ಉಪಾಧ್ಯ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ನೇತೃತ್ವದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆದ ಭಾರತ್ ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ ಉತ್ಸವ 2023 ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ಕೌಟ್ ಮತ್ತು ಗೈಡ್ಸ್ನಲ್ಲಿ ಭಾಗವಹಿಸುವುದರಿಂದ ಸತ್ ಚಿಂತನೆ, ಸದಾಚಾರಯುಕ್ತ ಸಂಸ್ಕಾರ ವಿಕಾಸನಗೊಳ್ಳುತ್ತದೆ. ನಾಯಕತ್ವದ ಗುಣ, ನಮ್ಮನ್ನು ಸಮಾಜದ ಮುಂದೆ ತೋರ್ಪಡಿಸುವ ವ್ಯಕ್ತಿತ್ವ ಇದರಿಂದ ಬೆಳೆಯುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ನ ಕೊಡುಗೆ ದೊಡ್ಡದು ಎಂದರು.
ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆ ಅಧ್ಯಕ್ಷೆ ಗುಣರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿತ್ವ ವಿಕಾಸವಾಗಲು ಸ್ಕೌಟ್ ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು, ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಎರಡು ದಿನಗಳ ಕಾಲ ರ್ಯಾಲಿಯನ್ನು ಆಯೋಜಿಸಲಾಗುವುದು. ರಾಜ್ಯ ಸಂಸ್ಥೆ ನೀಡಿದ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದೇವೆ. ಪಿ.ಜಿ ಆರ್ ಸಿಂಧ್ಯಾ ಅವರು ನಿರಂತರ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ ಎಂದರು.
ಕೊರ್ಗಿ ವಿಠಲ ಶೆಟ್ಟಿ ಚಾರಿಟೇಟಲ್ ಟ್ರಸ್ಟ್ನ ಅಧ್ಯಕ್ಷರಾದ ವಿಠಲ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮನೋಭಾವ ಮೈಗೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲಕ್ಷಾಮ ಕಂಡುಬರಲಿದೆ. ಭವಿಷ್ಯದ ದೃಷ್ಟಿಯಿಂದ ಪರಿಸರ ಪ್ರೇಮವನ್ನು ಪಾಲಿಸಬೇಕು ಎಂದರು. ಭಾರತ ಸ್ಕೌಟ್ಸ್-ಗೈಡ್ಸ್ ರಾಜ್ಯ ಸಹಸಂಘಟನಾ ಕಾರ್ಯದರ್ಶಿ ಸುಮನಾ ಶೇಖರ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್ ನಾಯಕ್,ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಕುಮಾರ್ ಶೆಟ್ಟಿ,ಹಿರಿಯ ಸ್ಕೌಟ್ ಶಿಕ್ಷಕ ಪದ್ಮನಾಭ ಅಡಿಗ, ಸ್ಥಳೀಯ ಸಂಸ್ಥೆ ಅಧ್ಯಕ್ಷೆ ರೇಖಾ ಯು ಉಪಸ್ಥಿತರಿದ್ದರು.
ಭಾರತ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಅನಂದ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ವಿನಾಯಕ ಸಭಾಗೃಹದ ಮುಖ್ಯಸ್ಥರಾದ ರವಿರಾಜ ಉಪಾಧ್ಯ, ಕೊರ್ಗಿ ವಿಠಲ ಶೆಟ್ಟಿ, ಪದ್ಮನಾಭ ಅಡಿಗ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅರಂಭದಲ್ಲಿ ರಜೌರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಮಂಗಳೂರಿನ ಕ್ಯಾ| ಪ್ರಾಂಜಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಕೌಟ್ ಶಿಕ್ಷಕಿ ತಾರಾದೇವಿ ಸ್ವಾಗತಿಸಿದರು. ವೀರೇಂದ್ರ ವಂದಿಸಿದರು. ಸದಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ರ್ಯಾಲಿಗೆ ಹಿರಿಯ ಸ್ಕೌಟ್ ಶಿಕ್ಷಕ ಪದ್ಮನಾಥ ಅಡಿಗ ಚಾಲನೆ ನೀಡಿದರು.