ಉಡುಪಿ, ನ 24 (DaijiworldNews/MS): ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿಳಂಬ ಧೋರಣೆಯನ್ನು ತಾಳದೆ, ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರ ಬಂದರು, ಗಂಗೊಳ್ಳಿ ಮೀನುಗಾರಿಕೆ ಬಂದರಿನ ಮರು ನಿರ್ಮಾಣ ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಷನ್ ಚಾನೆಲ್ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಕೈಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಂದರು ಇಲಾಖೆ ಹಾಗೂ ಸಿಆರ್ ಝ್ ನವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಳ್ಳುವುದರೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮಳೆ, ಬೆಳೆ ರಸಗೊಬ್ಬರಗಳ ದಾಸ್ತಾನುಗಳ ಬಗ್ಗೆ ಮಾತನಾಡಿದ ಅವರು, ಈ ಬಾರಿ ಭತ್ತದ ಇಳುವರಿ ಶೇಕಡ 50 ರಷ್ಟು ಕಡಿಮೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ತಾಲೂಕುವಾರು ವಿವರವನ್ನು ಸಂಗ್ರಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡ 22 ರಷ್ಟು ಕಡಿಮೆ ಮಳೆಯಾಗಿದ್ದು, ಅಂತರ ಜಲಮಟ್ಟವೂ ಶೇಕಡ 24ರಷ್ಟು ಕಡಿಮೆಯಾಗಿದ್ದು, ಮುಂಬರುವ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಾಕಿ ಉಳಿದಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು.
ಜಿಲ್ಲೆಯಲ್ಲಿಯೇ 604 ಕಿಂಡಿ ಅಣೆಕಟ್ಟುಗಳಿದ್ದು, ಅವುಗಳಲ್ಲಿ 357 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದಿರುವ 343 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಈ ಕೂಡಲೇ ಅಳವಡಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜೊತೆಗೆ ಉಡುಪಿ ನಗರಕ್ಕೆ ವಾರಾಹಿಯ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಉಪ್ಪು ನೀರು, ಸಿಹಿ ನೀರಿಗೆ ಬೆರೆಸುವುದನ್ನು ತಡೆಯುವ ಖಾರ್ ಲ್ಯಾಂಡ್ ನಿರ್ಮಾಣದ 11 ಕಾಮಗಾರಿ ವರದಿಗೆ ಪ್ರಾದೇಶಿಕ ನಿರ್ದೇಶಕರಿಂದ (ಪರಿಸರ) ಅನುಮೋದನೆ ಪಡೆದು ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದರು.
ಅಲ್ಲದೆ, ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗಳಲ್ಲಿ, ಅನುಮೋದನೆಯಾದ 71 ಕಾಮಗಾರಿಗಳಲ್ಲಿ 32 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಕೋಳಿ ಅಂಕಕ್ಕೆ ಅನುಮತಿ
ಕರಾವಳಿಯ ಪಾರಂಪರಿಕ ಕ್ರೀಡೆಯಾದ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಲ್ಲಿಸಿದ ಮನವಿಯನ್ನು ಆಲಿಸಿದ ಸಚಿವರು, ಕೋಳಿ ಅಂಕದ ವೇಳೆ ಯಾವುದೇ ಜೂಜು ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಹೇಳಿದರು.
ಡೀಮ್ಡ್ ಫಾರೆಸ್ಟ್ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಜೊತೆಗೆ ಕುಂಕ್ಕಿ ಜಾಗದಲ್ಲಿ ಮನೆಕಟ್ಟಿರುವ 1994 ಸಿಸಿಯಡಿಯಲ್ಲಿ ಅರ್ಜಿ ಹಾಕಿರುವ ಬಗ್ಗೆಯೂ ಚರ್ಚೆ ನಡೆಯಿತು. ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮಾಡಬಾರದು. ಅವುಗಳನ್ನು ನಿಯಾನುಸಾರವಾಗಿ ವಿಲೇವಾರಿ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರುಗಳಾದ ಯಶ್ಪಾಲ್ ಎ ಸುವರ್ಣ, ವಿ ಸುನಿಲ್ ಕುಮಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಡಿಎಫ್ಒ ಗಣಪತಿ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.