ಉಳ್ಳಾಲ,ನ 24 (DaijiworldNews/HR): ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಉಳ್ಳಾಲ ತಾಲೂಕಿನ ಮುಡಿಪು ಮೂಳೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕೊಲ್ನಾಡು ನಿವಾಸಿಯಾಗಿರುವ ಅಬ್ದುಲ್ ರಹಿಮಾನ್(42) ಮತ್ತು ಬೆಳ್ತಂಗಡಿ ತಾಲೂಕಿನ ಇಳಂತಿಲಾ ಗ್ರಾಮದ ಮೊಹಮ್ಮದ್ ಜಿಯಾದ್ (22) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1 ಲಕ್ಷ 75 ಸಾವಿರ ರೂ ಮೌಲ್ಯದ 35 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಆಲ್ಟೋ ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಲ್ಲಿ ಅಬ್ದುಲ್ ರಹಿಮಾನ್ ಎಂಬಾತನ ಮೇಲೆ ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಗ್ರಹ ಕಳುವು ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗಲಾಟೆ ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿಎಂಡಿಎಂಎ ಮಾರಾಟ ಪ್ರಕರಣಗಳು ದಾಖಲಾಗಿದೆ.
ಇನ್ನು ಮೊಹಮ್ಮದ್ ಜಿಯಾದ್ ಎಂಬಾತನ ಮೇಲೆ ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಸೇವನೆ ಮಾಡಿದ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ, ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಗಳ ಸಹಕಾರದಲ್ಲಿ ಪತ್ತೆ ಕಾರ್ಯ ನಡೆದಿದೆ.