ಉಡುಪಿ, ನ 23 (DaijiworldNews/AK): ನೇಜಾರುವಿನಲ್ಲಿ ನಡೆದ ಒಂದೆ ಕುಟುಂಬದ ನಾಲ್ವರ ಹತ್ಯಾ ಪ್ರಕರಣವನ್ನು ಅತ್ಯಂತ ಸಹನೆ ಮತ್ತು ಸಂಯಮದಿಂದ ನಿರ್ವಹಿಸಿ, ಇಡೀ ಸಮಾಜಕ್ಕೆ ಮಾದರಿಯಾದ ನನ್ನ ಎಲ್ಲಾ ಮುಸ್ಲಿಂ ಬಂಧುಗಳಿಗೂ ನಾನು ಚಿರರುಣಿ ಎಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಫಾದರ್ ರೋಕ್ ಡಿಸೋಜಾ ಹೇಳಿದರು.
ಮುಸ್ಲಿಂ ಒಕ್ಕೂಟದ ವತಿಯಿಂದ ಉಡುಪಿಯ ನೇಜಾರುವಿನಲ್ಲಿ ನಡೆದ ಹತ್ಯಾ ಪ್ರಕರಣದ ಸಂತ್ರಸ್ತರ ಸಂತಾಪ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಏನು ಆಗಬಾರದಿತ್ತು ಅದು ಆಗಿದೆ. ನಾನು ಮುಸ್ಲಿಂ ಸಮುದಾಯದ ಸಮಸ್ತರನ್ನು ಅವರ ಸಹನೆ ಮತ್ತು ಅಹಿಂಸಾ ಭಾವನೆಗಾಗಿ ಶ್ಲಾಘಿಸುತ್ತೇನೆ. ಎಷ್ಟೇ ಪ್ರಚೋದನೆ ಇದ್ದರೂ ಕೂಡಾ ಮುಸ್ಲಿಂ ಬಾಂಧವರು ಅದನ್ನು ಸಹಿಸಿಕೊಂಡಿದ್ದಾರೆ. ದುಖಃದಲ್ಲಿ ಇರುವವರಿಗೆ ನಾವು ಸಾಂತ್ವಾನ ನೀಡಬೇಕು ಆದರೆ ಈ ಸಾಂತ್ವಾನ ದೇವರಿಂದ ಬರಬೇಕು” ಎಂದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಯಾಸೀನ್ ಮಲ್ಪೆ ಮಾತನಾಡಿ ಕಳೆದ 2-3 ವರ್ಷಗಳಲ್ಲಿ ನಮ್ಮ ಉಡುಪಿ ಬೇರೆ ಬೇರೆ ಕಾರಣಗಳಿಗಾಗಿ ಇಡೀ ದೇಶ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಸುದ್ದಿ ಮಾಡಿತ್ತು. ನಮ್ಮ ಮಾಧ್ಯಮಗಳು ನಮ್ಮ ಜಿಲ್ಲೆಯ ಕುರಿತ ಬಿಸಿ ಬಿಸಿ ಸುದ್ದಿಗಳನ್ನು ಪ್ರಸಾರ ಮಾಡಿದವು. ಈಗ ಮತ್ತೊಮ್ಮೆ ಉಡುಪಿ ಸುದ್ದಿಯಲ್ಲಿದೆ, ಈಗ ನಡೆದಿರುವ ಘಟನೆ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಎಂದೂ ಕಂಡು ಕೇಳರಿಯದ ಘಟನೆ. ಈ ಘಟನೆ ಗೆ ನಮ್ಮ ಇಡೀ ಉಡುಪಿ ಬೆಚ್ಚಿ ಬಿದ್ದಿದೆ. ಜಾತಿ ಧರ್ಮದ ಭೇದ ಇಲ್ಲದೇ ಪ್ರತಿಯೊಬ್ಬರೂ ಈ ಘಟನೆಯ ಬಗ್ಗೆ ಕಂಬನಿ ಮಿಡಿದಿದ್ದಾರೆ ಎಂದರು.
ಈ ವಿಚಾರಣೆ ತ್ವರಿತ ಗತಿಯಲ್ಲಿ ಸಾಗಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆ ಯಾಗಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ವ್ಯಕ್ತಿ ಮಾಡಿದ ಪಾಪಕ್ಕೆ ಅವನ ಧರ್ಮ ಹೊಣೆಯಲ್ಲ. ಅವನು ಮಾಡಿದ ತಪ್ಪಿಗೆ ಅವನ ಇಡೀ ಸಮುದಾಯ ಹೊಣೆಯಲ್ಲ. ಅಪರಾಧಿಗೆ ಧರ್ಮ ರುವುದಿಲ್ಲ ಅವನು ಯಾವುದೇ ಧರ್ಮ ಪ್ರತಿನಿಧಿ ಆಗಿರುವುದಿಲ್ಲ, ಕೊಲೆಗಾರನಿಗೆ ಧರ್ಮದ ಹಿನ್ನಲೆ ಇರುವುದಿಲ್ಲ” ಎಂದು ಹೇಳಿದರು.
ಸಂತ್ರಸ್ತ ಕುಟುಂಬದ ನೂರ್ ಮಹಮ್ಮದ್ ಮಾತನಾಡಿ “ನನಗೆ ಏನೂ ಮಾತನಾಡಲು ಪದಗಳೇ ಬರುತಿಲ್ಲ. ನಿಮ್ಮ ಎಲ್ಲರ ಸಹನೆ, ತಾಳ್ಮೆ ನನ್ನಲ್ಲಿ ಇದೆ. ನಾನು ಮೊದಲು ಎನಿಸಿದ್ದು ನನಗೆ ನನ್ನ ಕುಟುಂಬ ಮಾತ್ರ ಇರುವುದು ಎಂದು, ಈಗ ನೋಡುವಾಗ ಇಡೀ ಸಮಾಜವೇ ನನ್ನ ಕುಟುಂಬ ಆಗಿದೆ. ಇದುವೇ ನನಗೆ ದೊಡ್ಡ ಶಕ್ತಿ ನನ್ನ ಪರಿಸ್ಥಿತಿ ಇನ್ನು ಮುಂದೆ ಯಾರಿಗೂ ಬರಬಾರದು ಮತ್ತು ಯಾವುದೇ ಮನೆಯಲ್ಲೂ ಈ ರೀತಿ ಆಗಬಾರದು” ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ “ಇಡೀ ಜಿಲ್ಲೆಯಲ್ಲಿ ಈ ವರೆಗೆ ನಡೆಯದ ಘಟನೆ ನಮ್ಮ ಜಿಲ್ಲೆಯಲ್ಲಿ ಮೊನ್ನೆ ನಡೆದಿದೆ. ಇತ್ತೀಚಿಗೆ ಪುತ್ತೂರಿನಲ್ಲಿ ಎರಡು ಮೂರು ಕೊಲೆ, ಕೊಲೆಯತ್ನ ಪ್ರಕರಣಗಳು ನಡೆದವು ಆದರೆ ಅಲ್ಲಿ ಪೋಲಿಸ್ ಇಲಾಖೆ ನಿಸ್ತೇಜದಿಂದ ವರ್ತಿಸಿದೆ. ಆದರೆ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಮರ್ಥ ಅಧಿಕಾರಿಯನ್ನು ನೇಮಿಸಿದ್ದರು. ಘಟನೆ ನಡೆದ 40 ಗಂಟೆಯಲ್ಲಿ ಆರೋಪಿಯನ್ನು ಗುರುತಿಸುವ ಕೆಲಸ ಆಗಿತ್ತು, ಪೋಲಿಸ್ ಇಲಾಖೆ ಸಮರ್ಥ ವಾಗಿ ಕೆಲಸ ನಿರ್ವಹಿಸಿದೆ. ಇಡೀ ಊರಿಗೆ ಊರೇ ಕಣ್ಣಿರಿಟ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಎಂ ಎ ಗಫೂರ್, ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಹಿಲ್ಡಾ ಡಿಸಿಲ್ವಾ, ಸಾಮಾಜಿಕ ಕಾರ್ಯಕ್ರತರಾದ ನಾಗೇಶ್ ಉದ್ಯಾವರ, ಬಾಲಕೃಷ್ಣ ಶೆಟ್ಟಿ, ಜನಾರ್ದನ ತೋನ್ಸೆ,, ಸುಂದರ್ ಮಾಸ್ತರ್, ಡಾಕ್ಟರ್ ಸುನೀತಾ ಅಶ್ರಫ್ ಕೋಡಿಬೆಂಗ್ರೆ, ಮಹಾಬಲ ತೋಳಾರ್, ಪ್ರತ್ಯಕ್ಷದರ್ಶಿ ಆಟೋ ಚಾಲಕ ಶ್ಯಾಮ್, ಕಿಶನ್ ಹೆಗ್ಡೆ ಕೊಳ್ಳಬೈಲು, ರಮೇಶ್ ಕಾಂಚನ್ ಸಂತಾಪ ಗುಡಿ ಗಳನ್ನಾಡಿದರು, ಡಾ.ಸುನೀತಾ ಶೆಟ್ಟಿ ರಚಿತ ಕವನವನ್ನು ವಾಚನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಎಸ್ ಎಂ ನೇಜಾರ್ ಅಧ್ಯಕ್ಷತೆ ವಹಿಸಿದ್ದರು. ಯಾಸೀನ್ ಕೊಡಿಬೆಂಗ್ರೆ ಕಾರ್ಯಕ್ರಮ ನಿರ್ವಹಿಸಿದರು.