ಕಾಸರಗೋಡು,ನ 21 (DaijiworldNews/ RA): ಯಕ್ಷಗುರು, ಸಂಘಟಕ, ಕಲಾವಿದ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ಅವರು ಇಂದು ವಿಧಿವಶರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರಾದ ಇವರು ಕೈರಂಗಳ ನಾರಾಯಣ ಹೊಳ್ಳ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಕೈರಂಗಳ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನಾರಾಯಣ ಹೊಳ್ಳರು, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾಗಿಯೂ ಗುರುತಿಸಿಕೊಂಡಿದ್ದಾರೆ.
ಇನ್ನು ಯಕ್ಷಗಾನದ ವೇಷಭೂಷಣಗಳ ನಿರ್ವಹಣೆ, ಹವ್ಯಾಸಿ ಕಲಾವಿದರಿಗೆ ಬಣ್ಣ ಹಚ್ಚುವ ಪ್ರಸಾಧನದ ಕೆಲಸದಲ್ಲಿಯೂ ಇವರು ಪರಿಣತಿ ಪಡೆದಿದ್ದರು.
ಇವರು ಹಲವಾರು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ, ಯಕ್ಷ ಶಿಕ್ಷಣ ನೀಡಿ, ಕಲಿಸಿ ಬೆಳೆಸಿದ ಗುರುಗಳಾಗಿದ್ದಾರೆ.ಇವರ ನಿಧನಕ್ಕೆ ಯಕ್ಷಗಾನ ಲೋಕ ಹಾಗು ಯಕ್ಷಗಾನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.