ಕುಂದಾಪುರ, ನ 21 (DaijiworldNews/HR): ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರಂಭಗೊಂಡ ಪ್ರತಿಭಟನೆ ಮಂಗಳವಾರವೂ ಮುಂದುವರೆದಿದೆ.
ಮಂಗಳವಾರ ಬೆಳಿಗ್ಗೆ ಕುಂದಾಪುರಕ್ಕೆ ಉಡುಪಿ ಎಸ್ಪಿ ಅರುಣ್ ಕುಮಾರ್ ಹಾಗು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭೇಟಿ ನೀಡಿ ಪ್ರತಿಭಟನಾ ಕಾರ್ಯವನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾಕುಮಾರಿ ವೈದ್ಯಾಧಿಕಾರಿಗಳ ವಿರುದ್ಧದ ಆರೋಪಗಳಿಗೆ ತಜ್ಞ ವೈದ್ಯರ ತಂಡ ರಚಿಸಿ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ವೈದ್ಯರನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅರುಣ್ ಕುಮಾರ್ ಅವರು ಮಾತನಾಡಿ, ಕಾನೂನಿನ ಇತಿಮಿತಿಯೊಳಗೆ ನಾವು ವ್ಯವಹರಿಸಬೇಕಾಗಿದ್ದು ಸಂಬಂಧ ಪಟ್ಟ ತನಿಖಾಧಿಕಾರಿಗಳ ತಂಡದ ಜೊತೆಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸ್ಥಳೀಯ ರಾಜಕೀಯ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಪ್ರತಿಕ್ರಿಯಿಸಿ, ಕುಂದಾಪುರ ತಾಲೂಕು ಆಸ್ಪತ್ರೆಯ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಾತುಕತೆ ನಡೆಸಿ ಒಂದು ವಾರದ ಒಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗಂಗೊಳ್ಳಿ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶ್ ರಾಜ್ ಮಾತನಾಡಿ, ಒಂದು ವಾರಗಳ ಗಡುವು ನೀಡಲಾಗಿದ್ದು ಸರಿಯಾದ ಕ್ರಮ ಕೈಗೊಳ್ಳದೆ ಇದ್ದಲ್ಲಿ ಈ ಬಗ್ಗೆ ಮುಂದಿನ ಹೋರಾಟ ನಡೆಸಲಾಗುವುದು ಇಂದು ಮಾಧ್ಯಮಗಳಿಗೆ ತಿಳಿಸಿದರು.
ಈ ಸಂದರ್ಭ ಸುಮಾರು ನೂರಾರು ಪ್ರತಿಭಟನಾಕಾರರು ನಿನ್ನೆ ರಾತ್ರಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.