ಕುಂದಾಪುರ, ನ 21 (DaijiworldNews/MS): ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಆಸ್ಪತ್ರೆಯ ಎದುರು ಮಗುವನ್ನು ಕಳೆದುಕೊಂಡ ಪೋಷಕರ ಜೊತೆಗೆ ನೂರಾರು ಜನ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಕುಂದಾಪುರದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಗಂಗೊಳ್ಳಿಯ ಶ್ರೀನಿವಾಸ ಖಾರ್ವಿ ಹಾಗೂ ಜ್ಯೋತಿ ಖಾರ್ವಿ ಎಂಬ ದಂಪತಿಗಳೇ ಮಗುವನ್ನು ಕಳೆದುಕೊಂಡವರು. ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದ ಜ್ಯೋತಿ ಖಾರ್ವಿ ಅವರು ನವಂಬರ್ 16ರಂದು ಚೆಕಪ್ ಮಾಡಿಸಿಕೊಳ್ಳಲು ಕುಂದಾಪುರ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆ ಸಂದರ್ಭ ಎಂಟೂವರೆ ತಿಂಗಳ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಬಗ್ಗೆ ವೈದ್ಯರಲ್ಲಿ ಪ್ರಸ್ತಾವಿಸಿದಾಗ ಅದೇನೂ ಬೇಡ ಎಂದಿದ್ದರು ಎನ್ನಲಾಗಿದೆ. ಬಳಿಕ ಮನೆಗೆ ಹಿಂತಿರುಗಿದ್ದು. ಮಾರನೇ ದಿನ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪತಿ ಶ್ರೀನಿವಾಸ ಖಾರ್ವಿಯವರು ಪತ್ನಿಯನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಅಲ್ಲಿ ಸರಿಯಾಗಿ ಡ್ಯೂಟಿ ಡಾಕ್ಟರ್ ಕೂಡಾ ಇಲ್ಲದೇ ಅಡ್ಮಿಷನ್ ಮಾಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ನವೆಂಬರ್ 20ರಂದು ಬೆಳಿಗ್ಗೆ ನಾರ್ಮಲ್ ಡೆಲಿವರಿ ಆಗಿದೆ. ಆದರೆ ಹೆರಿಗೆ ಆದ ತಕ್ಷಣ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಶ್ರೀನಿವಾಸ ಖಾರ್ವಿಯಲ್ಲಿ ತಿಳಿಸಿದ್ದಾರೆ. ಕಾರಣ ಕೇಳಿದಾಗ ಮಗುವಿನ ಕುತ್ತಿಗೆಗೆ ಕರುಳು ಸಿಕ್ಕಿಹಾಕಿಕೊಂಡಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಿತಗೊಂಡ ಸಾರ್ವಜನಿಕರು ಎಲ್ಲವೂ ಸರಿಯಾಗಿದ್ದ ಮೇಲೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಲಾಗುತ್ತಿದೆ.
ಸೋಮವಾರ ಸಂಜೆ ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಆಗಮಿಸಿ ಸಂತ್ರಸ್ತರ ಅಹವಾಲು ಆಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರೂ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಜಿಲ್ಲಾ ಆರೋಗ್ಯ ಅಧಿಕಾರಿ ಡಿ ಎಚ್ ಓ ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಡಿ ಹೆಚ್ ಒ ಸಂಜೆಯ ವೇಳೆ ಆಗಮಿಸಿದರಾದರೂ ವೈದ್ಯನ ಅಮಾನತು ಮಾಡದೇ ಮನವಿ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡರು.
ಬಳಿಕ ರಾತ್ರಿ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತರು. ಈ ಸಂದರ್ಭ ಕುಂದಾಪುರದ ನಾಗರೀಕರೂ ಆಸ್ಪತ್ರೆಯ ಮುಂದೆ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿದ್ದಲ್ಲದೇ, ಮಂಗಳವಾರ ವೈದ್ಯನನ್ನು ಅಮಾನತ್ತು ಮಾಡದೇ ಇದ್ದರೆ ಕುಂದಾಪುರ ಹಾಗೂ ಗಂಗೊಳ್ಳಿ ಬಂದ್ ಗೆ ಕರೆ ನೀಡುವ ೆಚ್ಚರಿಕೆಯನ್ನೂ ಶಾಸಕ ಗುರುರಾಜ್ ಗಂಟಿಹೊಳೆ ನೀಡಿದ್ದಾರೆ.