ಮಂಗಳೂರು, ಏ 16 (Daijiworld News/AZM):ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪನವರ ಕ್ರೈಸ್ತ ವಿರೋಧಿ ಹೇಳಿಕೆಯನ್ನು ವಿರೋಧಿಸಿರುವ ಇಫಕಾ(ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಕರ್ನಾಟಕ ಕ್ರಿಶ್ಚಿಯನ್ ಎಸೋಸೇಶನ್) ಈಶ್ವರಪ್ಪನವರು ಕ್ರೈಸ್ತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆಕೋರಬೇಕೆಂದು ಹೇಳಿದೆ.
ಈ ಕುರಿತು ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಫಕಾದ ಗೌರವಾಧ್ಯಕ್ಷರಾದ ಲೂಯಿಸ್ ಲೋಬೋ,ಈಶ್ವರಪ್ಪನವರ ಹೇಳಿಕೆ ದೇಶದ ಸಂವಿಧಾನ ಹಾಗೂ ಜಾತ್ಯತೀತ ಮೌಲ್ಯಗಳಿಗೆ ವಿರುದ್ದವಾಗಿದ್ದು, ಕೂಡಲೇ ಈಶ್ವರಪ್ಪನವರು ಕ್ರೈಸ್ತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.
ಬಳಿಕ ಭಾರತೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನನವರು ಮಾತನಾಡಿ,ಕರ್ನಾಟಕದಲ್ಲಿ ಕ್ರೈಸ್ತರು ೨.೫ ಶೇಕಡಾದಷ್ಟು ಇದ್ದಾರೆ. ಆದರೆ ವಿವಿಧ ಕ್ಷೇತ್ರದಲ್ಲಿ ಇವರ ಸೇವೆಯು ೧೦ ಶತಮಾನಕ್ಕಿಂತ ಮೇಲಿದೆ. ಇಷ್ಟು ಇರುವಾಗಲೂ ಈಶ್ವರಪ್ಪ ಕ್ರೈಸ್ತರು ಪ್ರಾಮಾಣಿಕರಲ್ಲ ಎಂದು ಹೇಳಿದ್ದು ಖಂಡನೀಯ ಎಂದು ಹೇಳಿದರು.ಇನ್ನು ಮದರ್ ತೆರೆಸಾರವರ ಸೇವೆಯನ್ನು ಕಂಡು ಭಾರತ ಸರಕಾರವು ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ.ಇದು ಭಾರತೀಯ ಕ್ರೈಸ್ತರು ಎಷ್ಟು ಪ್ರಾಮಾಣಿಕರಿದ್ದಾರೆ ಎಂದು ಹೇಳುವುದಕ್ಕೆ ಉತ್ತಮ ಸಾಕ್ಷಿಯಾಗಿದೆ. ಕ್ರೈಸ್ತರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿ ಈಶ್ವರಪ್ಪನಂತಹ ವ್ಯಕ್ತಿಗಳು ಇಂದು ಉನ್ನತ ಸ್ಥಾನದಲ್ಲಿ ಕುಳಿತುಕೊಂಡು ಮಾತಾಡಲು ಸಶಕ್ತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಇಫಕಾದ ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೋ, ಕ್ರೈಸ್ತ ಮಹಿಳಾ ಸಂಘಟನೆಯ ಅದ್ಯಕ್ಷೆ ಜಾನೆಟ್ ಬರ್ಬೋಜ, ಪ್ರೇಮ್ ಮಿನೇಜಸ್, ರಾಬರ್ಟ್ ಮೀನೇಜಸ್ ಉಪಸ್ಥಿತರಿದ್ದರು.