ಉಡುಪಿ, ನ 20 (DaijiworldNews/HR): ಈ ಬಾರಿ ಮೋದಿ ಸರ್ಕಾರ ಕೇಂದ್ರದಲ್ಲಿ ಬರುವುದಿಲ್ಲ. ಮೋದಿ ಸರಕಾರ ಬರದೇ ಇರೋದಕ್ಕೆ ಅನೇಕ ಕಾರಣಗಳಿವೆ. ಬಿಜೆಪಿ ನಾಯಕರ ಜೊತೆ ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ತಯಾರಿದ್ದೇನೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ನೇಮಕ ನಂತರ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಗೆಲ್ಲುವ ಹುಮ್ಮಸ್ಸು ಹೆಚ್ಚಿರುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು “ನನಗೆ ಅನುಭವ ಕಡಿಮೆ ಆದರೆ ನಾನು ಕೂಡ ಭವಿಷ್ಯ ಹೇಳಬಲ್ಲೆ. ಈ ಬಾರಿ ಮೋದಿ ಸರ್ಕಾರ ಕೇಂದ್ರದಲ್ಲಿ ಬರುವುದಿಲ್ಲ. ಮೋದಿ ಸರಕಾರ ಬರದೇ ಇರೋದಕ್ಕೆ ಅನೇಕ ಕಾರಣಗಳಿವೆ. ಬಿಜೆಪಿ ನಾಯಕರ ಜೊತೆ ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ತಯಾರಿದ್ದೇನೆ. ವಿವಾದ ಬೇಡ ಅಭಿವೃದ್ಧಿ ಇಟ್ಟುಕೊಂಡು ಚರ್ಚೆ ಮಾಡೋಣ. ನೋಟ್ ಅಮಾನ್ಯ, ಜಿಡಿಪಿ, ವಿಚಾರ ಇಟ್ಟುಕೊಂಡು ಮಾತನಾಡೋಣ. ಸ್ಮಾರ್ಟ್ ಸಿಟಿ ಬುಲೆಟ್ ಟ್ರೈನ್, ಎಲ್ಲರಿಗೂ ಮನೆ ಅನೇಕ ಘೋಷಣೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ. ದಕ್ಷಿಣ ಭಾರತದಲ್ಲಿ ಐದಾರು ಕಿಂತ ಹೆಚ್ಚು ಸೀಟು ಬಿಜೆಪಿಗೆ ಬರಲ್ಲ, ಹೆಚ್ಚು ಅಂದರೆ 10 ಸೀಟು ಬರಬಹುದು. 2004 ರಿಂದ 2014ರ ವರೆಗೆ ನಮ್ಮ ಜಿಡಿಪಿ 183% ಗ್ರೋಥ್ ಇತ್ತು . ಕಳೆದ 9 ವರ್ಷಗಳಲ್ಲಿ ಕೇವಲ 83% ಇದೆ. ನೋಟ್ ಅಮಾನ್ಯದಿಂದ ಭಯೋತ್ಪಾದನೆ ನಿಲ್ಲುತ್ತೇ ಎಂದರು. ಆದರೆ ಪುಲ್ವಾಮಾ ಅಟ್ಯಾಕ್ ಆಗಲಿಲ್ಲವೇ 300 ಕೆಜಿ ಆರ್ಡಿಎಕ್ಸ್ ಸಿಗಲಿಲ್ವೆ” ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರದಲ್ಲಿ ಯತೀಂದ್ರ ಹಸ್ತಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು “ನಾನು ಸಚಿವ ಸಂಪುಟದಲ್ಲಿ ಇದ್ದೇನೆ ಆ ಥರ ನನಗೆ ಏನೂ ಅನಿಸುತ್ತಿಲ್ಲ. ನಾವೆಲ್ಲ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ನಮಗೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇನ್ನು ಯತೀಂದ್ರ ಎಲ್ಲಿಂದ ನಮಗೆ ಹಸ್ತಕ್ಷೇಪ ಮಾಡಬೇಕು. ವೈರಲ್ ಆಗಿರುವ ವಿಡಿಯೋಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಮ್ಮ ಭಾಗದಲ್ಲಿ ಅನೇಕ ಮಂದಿ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆ. ಈಗಲೇ ನಾನು ಹೆಸರು ಭಹಿರಂಗಪಡಿಸಲ್ಲ. ನಾಲ್ಕೈದು ಮುಖಂಡರು ಕಾಂಗ್ರೆಸ್ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಅವರಲ್ಲಿ ಮಾಜಿ ಮಂತ್ರಿಗಳು ಕೂಡ ಇದ್ದಾರೆ. ಧಾರವಾಡ ಜಿಲ್ಲೆಯಿಂದ ಅನೇಕ ಮಂದಿ ಸೇರ್ಪಡೆಗೆ ಉತ್ಸುಕತೆ ತೋರಿದ್ದಾರೆ” ಎಂದರು.
ಇನ್ನು ಸ್ವಿಗ್ಗಿ, ಝೋಮ್ಯಾಟೋ ಮತ್ತು ಇನ್ನಿತರ ಆನ್ಲೈನ್ ಫ್ಲಾಟ್ ಫಾರ್ಮ್ಗಳಿಗೆ ಸರ್ವಿಸ್ ಪ್ರೊವೈಡ್ ಮಾಡುವ ಕಾರ್ಮಿಕರ ಭದ್ರತೆಗೆ ವಿಶೇಷ ಕಾನೂನಿನ ಕುರಿತು ಮಾತನಾಡಿದ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ “ ಇವರ ಭದ್ರತೆಗೆ ವಿಶೇಷ ಕಾನೂನು ತರುತ್ತೇವೆ. ಮುಖ್ಯಮಂತ್ರಿಗಳು ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ. ಒಂದೆರಡು ತಿಂಗಳಲ್ಲಿ ನೀತಿ ನಿಯಮ ರೂಪಿಸುತ್ತೇವೆ. ಆನ್ಲೈನ್ ನೋಂದಣಿ ಮಾಡಿಸಿಕೊಳ್ಳುತ್ತೇವೆ. ಅಂದಾಜು 4 ರಿಂದ 5 ಲಕ್ಷ ಜನ ಕಾರ್ಮಿಕರಿಗೆ ಅನುಕೂಲವಾಗಲಿದೆ. ರಾಜಸ್ಥಾನ ಮಾದರಿಯ ಒಂದು ಮಸೂದೆ ಈಗಾಗಲೇ ಇದೆ. ಇದೇ ಮಾದರಿಗೆ ಸುಧಾರಣೆ ತಂದು ಮಸೂದೆ ಮಂಡಿಸುತ್ತೇವೆ. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ನೀಡಲು ಯುನಿವರ್ಸಲ್ ಕಾರ್ಡ್ ತರುವ ಚಿಂತನೆ ಇದೆ” ಎಂದಿದ್ದಾರೆ.
ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು “ವಿದ್ಯಾರ್ಥಿ ವೇತನ ನಾವು ಕಡಿತ ಮಾಡಿಲ್ಲ. 2021 ರಲ್ಲಿ 2,000 ಇದ್ದ ವಿದ್ಯಾರ್ಥಿ ವೇತನ ಎಂಟು ಸಾವಿರಕ್ಕೆ ಏರಿಸಿದರು. 10000 ನೀಡುವವರಿಗೆ 30,000 ಕೊಟ್ಟರು. ಮೂವತ್ತು ಸಾವಿರ ಕೊಡುವವರಿಗೆ ಒಂದು ಲಕ್ಷ ರುಪಾಯಿ ಕೊಟ್ಟರು. ಇದು ಅವೈಜ್ಞಾನಿಕ ಕ್ರಮವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಡ್ ಬೇಡಿಕೆ ಬಂತು. ಹಾವೇರಿ ಜಿಲ್ಲೆಯಲ್ಲಿ ಮೂರು ಲಕ್ಷ ಕಾರ್ಡುಗಳಿವೆ. ಇದರಲ್ಲಿ ಅನೇಕ ನಕಲಿ ಕಾರ್ಡುಗಳಿವೆ. ಈ ಬಾರಿ 13 ಲಕ್ಷ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ. ವೈಜ್ಞಾನಿಕ ರೀತಿಯಲ್ಲಿ ಈ ಸಮಸ್ಯೆ ನಿರ್ವಹಿಸುತ್ತೇವೆ” ಎಂದು ಭರವಸೆ ನೀಡಿದರು.