ಕುಂದಾಪುರ, ಏ 16 (Daijiworld News/SM): ಕಾಂಗ್ರೆಸ್ ಮುಕ್ತ ಮಾಡುವುದು ಬಿಜೆಪಿಯ ಗುರಿಯಾಗಿದ್ದರೂ ರಾಜ್ಯದಲ್ಲಿ ಜೆಡಿಎಸ್ನಿಂದಲೇ ಕಾಂಗ್ರೆಸ್ ಮುಕ್ತವಾಗುತ್ತಿದೆ. ರೇವಣ್ಣನ ಲಿಂಬೆ ಹಣ್ಣಿನ ಪವಾಡದಿಂದ ಕಾಂಗ್ರೆಸಿಗರು ಜೆಡಿಎಸ್ನವರು ಹೇಳಿದಂತೆ ಕೇಳುವ ಸ್ಥಿತಿ ಬಂದಿದೆ. ಇಂದಿರಾ ಗಾಂಧಿಯವರು ಸ್ಪರ್ಧೆ ಮಾಡಿದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿರುವುದು ನೋಡಿದರೆ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ಸ್ವಾಭಿಮಾನಿ ಕಾಂಗ್ರೆಸಿಗರು ಮೋದಿಜಿಯವರನ್ನು ಬೆಂಬಲಿಸಬೇಕಾಗಿದೆ ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಕುಂದಾಪುರದ ನೆಂಪುವಿನಲ್ಲಿರುವ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರ ನಿವಾಸದಲ್ಲಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರ ಶಿಸ್ತುಬದ್ದ ತಂಡದೊಂದಿಗೆ ಪ್ರಚಾರ ಕಾರ್ಯ ನಡೆಯುತ್ತಿದೆ. ಕ್ಷೇತ್ರದ ಶಾಸಕರು ಕಡಿಮೆ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ತಂದಿರುವ ಅನುದಾನ, ಮೋದಿ ನೇತೃತ್ವದ ಸರ್ಕಾರ ನೀಡಿರುವ ಕಾರ್ಯಕ್ರಮಗಳು, ಯಡಿಯೂರಪ್ಪನವರು ಸಂಸದರಾಗಿದ್ದ ಸಂದರ್ಭ ಕ್ಷೇತ್ರಕ್ಕೆ ನೀಡಿರುವ ಅನುದಾನ, ಅಭಿವೃದ್ದಿ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯ ಆಗುತ್ತಿದೆ. ಕ್ಷೇತ್ರದಲ್ಲಿ ದೊಡ್ಡ ಅಂತರವನ್ನು ತಂದುಕೊಡುವಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಮತದಾರರು ಕೂಡಾ ಮತ್ತೆ ಮೋದಿ ನೇತೃತ್ವದ ಸರ್ಕಾರ ಬರಬೇಕು ಎನ್ನುವ ಆಶಯದಲ್ಲಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎನ್ನುವ ದೃಡ ಸಂಕಲ್ಪವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳಂತೆ ರೈತರಿಗೂ ಪಿಂಚಣಿ ಕೊಡುವ ಯೋಜನೆ, ರೈತರಿಗೆ 1 ಲಕ್ಷದ ತನಕ ಬಡ್ಡಿ ರಹಿತವಾಗಿ ಸಾಲ ನೀಡುವ ಯೋಜನೆ, ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಮೀನುಗಾರರಿಗೂ ಕೂಡಾ ವಿಶೇಷ ಒತ್ತು ನೀಡುವ ಕೆಲಸ ಮಾಡಲಿದ್ದಾರೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ತನಕ ಎನ್.ಎಚ್ ಆಗುತ್ತಿದ್ದು, ಅಲ್ಲಿ ಬೈಪಾಸ್, ವರ್ತುಲ ರಸ್ತೆ ನಿರ್ಮಾಣ ಚಿಂತನೆ ಮಾಡಲಾಗುತ್ತಿದೆ. ಒಳ ಚರಂಡಿ ವ್ಯವಸ್ಥೆ ವೇಗಕ್ಕೂ ಕ್ರಮ ಕೈಗೊಳ್ಳಲಾಗುವುದು. ಬೈಂದೂರಿನಲ್ಲಿ ವಿಮಾನ ನಿಲ್ದಾಣ ಅಥವಾ ಇಳಿದಾಣವಾದರೆ ಬಂಡವಾಳಶಾಹಿಗಳ ಪ್ರವೇಶದಿಂದ ಉದ್ಯೋಗ ಸೃಷ್ಟಿಗೂ ಅನುಕೂಲವಾಗುತ್ತದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.