ಉಳ್ಳಾಲ, ನ 20 (DaijiworldNews/MS): ಇಲ್ಲಿನ ಕೋಡಿ - ಕೋಟೆಪುರದಲ್ಲಿ ಕಲ್ಲಿದ್ದಲು ಉಪಯೋಗಿಸಿ ಮೀನು ಸಂಸ್ಕರಣಾ ಘಟಕಗಳು ಕಾರ್ಯಾಚರಿಸುವುದರಿಂದ ಹಾರುಬೂದಿ ಪರಿಸರವಿಡೀ ಹರಡಿ ಮಾರಕ ಕಾಯಿಲೆಗಳು ಜನರಲ್ಲಿ ಕಾಡುತ್ತಿದೆ. ಮಾಲಿನ್ಯ ಕುರಿತು ವಿವರಿಸಿದರೆ ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿ ಅಧಿಕಾರಿ ಕಾರ್ಖಾನೆ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಪರಿಸರದಲ್ಲಿ ವಾಸಿಸುವಂತೆ ಮಾಡಿ, ಸಮಸ್ಯೆಗಳನ್ನು ಅರಿಯುವಂತೆ ಮಾಡಬೇಕಿದೆ. ಕಾನೂನುಮೀರಿ ಪರಿಸರಕ್ಕೆ ಮಾರಕವಾಗಿ ಉಳ್ಳಾಲದ ಕೈಗಾರಿಕೆಗಳು ಮುಂದುವರಿದಲ್ಲಿ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿ ಮುತ್ತಿಗೆ ಹಾಕಲು ಡಿವೈಎಫ್ ಐ ಸಿದ್ಧವಿದೆ ಎಂದು ಡಿವೈಎಫ್ ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು.
ಕಲ್ಲಿದ್ದಲು ಆಧಾರಿತ ಮೀನು ಸಂಸ್ಕರಣಾ ಕಂಪೆನಿ ಮುಚ್ಚಲು ಒತ್ತಾಯಿಸಿ, ಪರಿಸರಕ್ಕೆ ಮಾರಕವಾದ ಕಂಪನಿಯ ವಿರುದ್ಧ ಕ್ರಮ ಜರಗಿಸಲು ವಿಫಲವಾದ ಜಿಲ್ಲಾಡಳಿತದ ಧೋರಣೆ ಖಂಡಿಸಿ ಕೋಡಿ ಕೋಟೆಪುರ ಯುನೈಟೆಡ್ ಮೆರೈನ್ ಮೀನು ಸಂಸ್ಕರಣಾ ಘಟಕದ ಮುಂಭಾಗದಲ್ಲಿ ಡಿವೈಎಫ್ ಐ ಕೋಡಿ ಕೋಟೆಪುರ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೋಡಿ- ಕೋಟೆಪುರ ಪರಿಸರದಲ್ಲಿ ಮೀನಿನ ತೈಲ ಸಂಸ್ಕರಣಾ ಘಟಕಕ್ಕೆ ಕಾನೂನಾತ್ಮಕ ಅನುಮತಿಗಳಿವೆ ಅನ್ನುವ ಹೇಳಿಕೆ ನೀಡುತ್ತಿರಬಹುದು. ಆದರೆ ಪರಿಸರವನ್ನು ಮಲಿನಗೊಳಿಸುವ ಕೈಗಾರಿಕೆಗಳಿಗೆ ಅನುಮತಿ ಕೊಟ್ಟ ಅಧಿಕಾರಿಗಳು ಭ್ರಷ್ಟರು. ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿ ಅಧಿಕಾರಿ ಕಾರ್ಖಾನೆ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅಧಿಕಾರಿ ಈ ಪರಿಸರ ದಲ್ಲಿ ವಾಸಮಾಡಬೇಕು. ಕಲ್ಲಿದ್ದಲಿನ ಉಪಯೋಗದಿಂದ ಹಾರುಬೂದಿ ಪರಿಸರದಲ್ಲಿಡೀ ಹರಿದಾಡುತ್ತಿದೆ. ಇದರಿಂದ ಆಗಿರುವ ಅನಾಹುತಗಳನ್ನು ಅಧಿಕಾರಿಗಳು ನೋಡಬೇಕು. ಕೈಗಾರಿಕೋದ್ಯಮಿಗಳಿಗೆ ಸುರಕ್ಷತಾ ಕ್ರಮ ದೊಡ್ಡ ಮೊತ್ತ ತಗಲುವುದು ಎಂದು ಹೇಳುವ ಅಧಿಕಾರಿಗಳು ಕಂಪೆನಿ ಮಾಲೀಕರು ಅಧಿಕಾರಿಗಳಾಗಿದ್ದಾರ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ನಗರಸಭೆ, ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳು ಪರಿಸರದ ಸ್ಥಿತಿಯನ್ನು ವಿವರಿಸುತ್ತಿಲ್ಲ. ಇಡೀ ಪರಿಸರ ಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್ ಬಾಧಿತರು ಹೆಚ್ಚುತ್ತಿದ್ದು, ವಯಸ್ಕರು ಕೆಮ್ಮುವಿನಿಂದ ಬಳಲುತ್ತಿದ್ದಾರೆ. ಕೋಡಿ ಕೋಟೆಪುರ ಜನರನ್ನು ಆರೋಗ್ಯ ತಪಾಸಣೆ ಯನ್ನು ಆರೋಗ್ಯ ಇಲಾಖೆ ಕೈಗೊಂಡಾಗ ಮಾಹಿತಿ ಬಹಿರಂಗವಾಗಲಿದೆ. ಉಳ್ಳಾಲ ತಾಲೂಕಿನಲ್ಲಿ ಅತಿ ಹೆಚ್ಚು ಜನರಿಗೆ ಕ್ಯಾನ್ಸರ್ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆಗಳು ಉಂಟಾಗಿ ಅನೇಕ ಹೃದಯಾಘಾತಗಳು ಆಗುತ್ತಿವೆ. ಜಲ, ನೆಲ ಸೇರಿ ಮಾನವನ ಜೀವಕ್ಕೆ ಸೇರುವ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಮತ್ಸ್ಯಸಂಕುಲ ಸಾಯುವ ವೀಡಿಯೋ ಮೀನುಗಾರ ಹಾಕಿ ದು:ಖ ವ್ಯಕ್ತಪಡಿಸಿದ್ದರೂ, ಈವರೆಗೆ ಎಂಜಲು ಕಾಸಿನಲ್ಲಿ ಬದುಕುವ ಅಧಿಕಾರಿಗಳು ಸಮುದ್ರಕ್ಕೆ ಮಲಿನ ನೀರು ಬಿಡುವ ಕೈಗಾರಿಕೆಗಳಿಗೆ ನೋಟೀಸೇ ಮಾಡಿಲ್ಲ. ಮೀನುಗಾರರಿಗೆ, ಮೀನು ಸಂಕುಲಕ್ಕೆ ತೊಂದರೆಯಾದಲ್ಲಿ ಡಿವೈಎಫ್ ಐ ಎಂದುಗೂ ಸಹಿಸುವುದಿಲ್ಲ. ಹಲ್ಲು ಮತ್ತು ಕಲ್ಲು ನಡುವೆ ಜಗಳವಾದಲ್ಲಿ ಹಲ್ಲೇ ಮುರಿಯೋದು, ಕಲ್ಲಿನಂತೆ ಡಿವೈಎಫ್ ಐ ಇದೆ. ನೂರಾರು ಪೈಪುಗಳು ಸಮುದ್ರದಡಿಯಲ್ಲಿದೆ, ಇವೆಲ್ಲದಕ್ಕೆ ಅನುಮತಿ ಕೊಟ್ಟವರಾರು?. ಹಾರುಬೂದಿಯನ್ನು ವಸತಿ ಪ್ರದೇಶದ ಮಧ್ಯಭಾಗದಲ್ಲಿ ಬಿಡಲಾಗುತ್ತಿದೆ. ಪ್ರಕ್ರಿಯೆಗಳು ಮುಂದುವರಿದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಮುಂದಿನ ಹೆಜ್ಜೆ ನಗರಸಭೆ ಕಡೆಗೆ ಇಡಲಿದ್ದೇವೆ ಅಲ್ಲಿ ನ್ಯಾಯ ಸಿಗದಿದ್ದಲ್ಲಿ ಬೈಕಂಪಾಡಿಯಲ್ಲಿರುವ ಪರಿಸರ ಮಾಲಿನ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿಯೆದುರು, ನಂತರ ವಿಧಾನಸಭೆಗೆ ಕಾಲ್ನಡಿಗೆ ಮೂಲಕ ಹೋಗುತ್ತೇವೆ. ದಾನಶೂರ ಕರ್ಣ ಅನ್ನುವ ಮಾಲೀಕರು ಕ್ಯಾನ್ಸರ್, ಅಸ್ತಮಾವನ್ನು ದಾನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಬರುವ ಲಾರಿಗಳನ್ನು ತಡೆಯುವ ಪ್ರಯತ್ನವನ್ನು ಡಿವೈಎಫ್ ಐ ಮಾಡಲಿದೆ ಎಂದು ಎಚ್ಚರಿಸಿದರು.
ಮುಖಂಡ ಮನೋಜ್ ವಾಮಂಜೂರು ಮಾತನಾಡಿಬದುಕುವ ಹಕ್ಕನ್ನು ಕಸಿಯುವ ಕೆಲಸಗಳಾಗುತ್ತಿವೆ, ಸಮುದ್ರ ನದಿ ತೀರ ಪ್ರವಾಸೋದ್ಯಮಕ್ಕೆ ಸೂಕ್ತ. ಜನಪ್ರತಿನಿಧಿಗಳ ಸಮಸ್ಯೆಯಿಂದ ಕಂಪೆನಿಗಳು ಬರಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ರಝಾಕ್ ಮೊಂಟೆಪದವು, ಅಶ್ರಫ್ ಹರೇಕಳ, ರಝಾಕ್ ಮುಡಿಪು, ಜಯಂತ್ ನಾಯ್ಕ್, ಇಬ್ರಾಹಿಂ ಮದಕ, ಜನಾರ್ದನ ಅಮೀನ್, ಬಶೀರ್ ಲಚ್ಚಿಲ್, ಅಶ್ರಫ್ ಅಲೇಕಳ, ಇಬ್ರಾಹಿಂ ಕೋಟೆಪುರ, ನೌಫಾಲ್ ಕೋಟೆಪುರ, ರಿಯಾಝ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಮುನ್ನ ಕೋಟೆಪುರದಿಂದ ಕೋಡಿ ಕೈಗಾರಿಕೆಗಳಿರುವ ಪ್ರದೇಶದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಉಳ್ಳಾಲ ಠಾಣಾ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.