ಮಂಗಳೂರು, ಏ 16 (Daijiworld News/SM): ಈ ಬಾರಿಯ ಲೋಕಸಭಾ ಚುನಾವಣೆಯನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ. ಮುಂದೆ ಇಂತಹ ಚುನಾವಣೆ ಬರುವುದೇ ಇಲ್ಲ. ನಿಖಿಲ್, ಕಟೀಲ್, ಪಿಟಿಲ್ ಈ ಚುನಾವಣೆಯಲ್ಲಿ ಪ್ರಮುಖರಲ್ಲ. ಅಭ್ಯರ್ಥಿಗಳು ನಮಗಲ್ಲ, ಮೋದಿಗೆ ವೋಟು ಕೊಡಿ ಎಂದು ಮತಯಾಚನೆ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮೋದಿ ಬದಲು 'ಹೋಗಿ ಹೋಗಿ' ಅನ್ನುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಜಪೇಯಿ, ಮೋದಿ ಜೊತೆಗೆ ನಾನು ಮೊದಲು ಸಂಪರ್ಕದಲ್ಲಿದ್ದೆ. ಮೋದಿ ಹುಟ್ಟುವ ಮುನ್ನವೇ ಪಾಕ್ ಜೊತೆ ಯುದ್ದ ನಡೆದಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ 27 ಸರ್ಜಿಕಲ್ ಸ್ಟೈಕ್ ನಡೆದಿತ್ತು. ಆದರೆ ಯುಪಿಎ ಸರ್ಕಾರ ಯುದ್ದವನ್ನು ರಾಜಕೀಯಕ್ಕೆ ಬಳಸಲಿಲ್ಲ. ಭಾವನಾತ್ಮಕ ವಿಚಾರದಲ್ಲಿ ಬಿಜೆಪಿಯಿಂದ ಚುನಾವಣಾ ಆಟ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾಗಾಂಧಿಯವರು ಆಡಳಿತದಲ್ಲಿದ್ದ ಸಂದರ್ಭ ಯುದ್ದ ಮಾಡಲಿಲ್ಲ. ಬದಲು ಸೈನಿಕರು ದೇಶಕ್ಕಾಗಿ ಹೋರಾಟ ನಡೆಸಿದ್ದರು. ಅದೇ ರೀತಿಸರ್ಜಿಕಲ್ ಸ್ಟೈಕ್ ವಿಷಯ ಸೈನ್ಯದ ಆಂತರಿಕ ವಿಚಾರವಾಗಿದೆ. ಮೋದಿಯವರು ಸೈನ್ಯದ ಆಂತರಿಕ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಸೈನಿಕರನ್ನು ರಾಜಕೀಯವಾಗಿ ಬಳಸಬಾರದು ಎಂದರು.
ಮನಮೋಹನ್ ಸಿಂಗ್ ಅಡಳಿತದಲ್ಲಿದ್ದ ಸಂದರ್ಭ ಆರ್ಥಿಕತೆ ಕುಸಿದಿರಲಿಲ್ಲ. ಮೋದಿ ಸ್ಟ್ರಾಂಗ್ ಇದ್ದಾರೆ ಆದರೆ, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಮೋದಿ ಮುಂದೆ ಪ್ರಧಾನಮಂತ್ರಿ ಆಗುವುದು ಹಗಲುಗನಸು. ಕೇಂದ್ರದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ಕರ್ನಾಟಕದಲ್ಲಿ ಮೈತ್ರಿ ಪಕ್ಷಕ್ಕೆ ಬಹುಮತ ಸಿಗುತ್ತದೆ. ವಿಜಯಾ ಬ್ಯಾಂಕನ್ನು ಗುಜರಾತಿಗಳ ಬಾಯಿಗೆ ಇಟ್ಟಿದ್ದಾರೆ.ಬ್ಯಾಂಕ್ ಆಫ್ ಬರೋಡಾವನ್ನು ಗುಜರಾತಿಗಳು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು. ನಳೀನ್ ಕುಮಾರ್ ಬ್ಯಾಂಕ್ ವಿಲೀನ ವಿರೋಧಿಸಿ ಯಾಕೆ ರಾಜೀನಾಮೆ ನೀಡಲಿಲ್ಲ..? ಎಂದು ಪ್ರಶ್ನಿಸಿದ ಅವರು, ಅಧಿಕಾರ ಅನ್ನುವುದು ಹಗಲು ವೇಷ ಇದ್ದಂತೆ. ಮೋದಿಯವರಿಗೆ ಇದು ಕೊನೆಯ ಕಾಲವಾಗಿದೆ. ಜೂನ್ ನಿಂದ ಅಚ್ಚೇ ದಿನ್ ಶುರುವಾಗುತ್ತದೆ ಎಂದರು.
ಇನ್ನು ವಾಗ್ದಾಳಿ ಮುಂದುವರೆಸಿದ ಅವರು, ಬಿಜೆಪಿ ಪಕ್ಷ ಕಟ್ಟಿದವರನ್ನು ಮೋದಿ ಬಳಗ ಹೊರಗಿಟ್ಟಿದೆ. ಮೋದಿ 'ವ್ಯಾಪಾರಿ, ಬೇಪರಿ' ಆಗಿದ್ದಾರೆ. ಮೋದಿ ಬೇಪರಿ ಆಗಿದ್ದರಿಂದ ದೇಶ ಸಂಕಷ್ಟದಲ್ಲಿದೆ. ಪಾಕ್ ಗೆ ಭಾರತ ದಿವಾಳಿಯಾಗಬೇಕು, ಅದಕ್ಕೆ ಮೋದಿಗೆ ಜೈ ಅಂದಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತ ಹಾಳಾಗಬೇಕೆಂಬ ಆಸೆ. ಅದಕ್ಕಾಗಿ ಮೋದಿ ಪ್ರಧಾನಿಯಾಗಬೇಕೆಂದು ಇಮ್ರಾನ್ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಗೆ ವ್ಯಕ್ತಿ ಮುಖ್ಯವಲ್ಲ, ದೇಶ ಮುಖ್ಯ ಎಂದು ಅವರು ಹೇಳಿದ್ದಾರೆ.