ಮಂಗಳೂರು, ನ 18 (DaijiworldNews/MS): ಎಂಟೂವರೆ ತಿಂಗಳ ತುಂಬು ಗರ್ಭಿಣಿಯೊಬ್ಬರಿಗೆ ಹೈಕೋರ್ಟ್ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಮನೆ ಸಮೀಪದ ಕೋರ್ಟ್ನಲ್ಲೇ ಸಿವಿಲ್ ನ್ಯಾಯಾಧೀಶರ ಹುದ್ದೆಯ ಮುಖ್ಯ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುವ ಮೂಲಕ ಮಾನವೀಯತೆ ಮೆರೆದಿದೆ .ಈ ರೀತಿ ಅಭ್ಯರ್ಥಿಯ ಮನೆಯ ಬಳಿಯೇ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ನೀಡಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಮೊದಲೇ ನಿಗದಿಯಾಗಿದ್ದಂತೆ ಇಂದು ಮತ್ತು ನಾಳೆ (ನ.18 ಮತ್ತು19)ಸಿವಿಲ್ ನ್ಯಾಯಾಧೀಶರ ನೇಮಕದ ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಆದರೆ ನೇತ್ರಾವತಿ ತುಂಬು ಗರ್ಭಿಣಿಯಾಗಿರುವುದರಿಂದ ಬೆಂಗಳೂರಿಗೆ ಪ್ರಯಾಣಿಸುವುದು ಸಾಧ್ಯವಿಲ್ಲ . ಇದನ್ನು ಅರಿತು ವಕೀಲೆ ನೇತ್ರಾವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿಸಿದ್ದಾರೆ.
ಹೈಕೋರ್ಟ್ 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇರ ನೇಮಕಕ್ಕೆ 2023ರ ಮಾ.9ರಂದು ಅರ್ಜಿಗಳನ್ನು ಕರೆದಿತ್ತು. ಅದಕ್ಕೆ ಜು.23ರಂದು ನಡೆಸಿದ ಪ್ರಾಥಮಿಕ ಪರೀಕ್ಷೆಗೆ 6ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು ಮತ್ತು 1022 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೇತ್ರಾವತಿ ಅವರೂ ಸಹ ಇದ್ದರು.
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ನೇತ್ರಾವತಿ ಅವರು ಎಂಟೂವರೆ ತಿಂಗಳುಗರ್ಭಿಣಿಯಾಗಿರುವುದರಿಂದ ಅವರ ಆರೋಗ್ಯ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಪ್ರವಾಸ ಮಾಡಲಾಗದು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿಸುವಂತೆ ಕರ್ನಾಟಕ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಆ ಮನವಿ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ಕುಮಾರ್ ನೇತೃತ್ವದ ಐವರು ಸದಸ್ಯರ ನೇಮಕ ಸಮಿತಿಯ ಮುಂದೆ ಬಂದಿತ್ತು. ಆಗ ಆ ಅಭ್ಯರ್ಥಿಯ ಆರೋಗ್ಯ ಸ್ಥಿತಿಯನ್ನು ಅರಿತು ಸಮಿತಿ ಅವರಿಗೆ ಮಂಗಳೂರಿನಲ್ಲಿರುವ ಕೋರ್ಟ್ನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರ್ಧರಿಸಿತು. ಆ ನಿರ್ಧಾರವನ್ನು ಸಿಜೆ ಪಿ.ಬಿ.ವರ್ಲೆ ಅವರು ಅನುಮೋದಿಸಿದರು.
ಪ್ರತ್ಯೇಕ ನಿಗಾ ವ್ಯವಸ್ಥೆ
ಈ ತೀರ್ಮಾನದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ಕುಮಾರ್ ಅವರು ಮಂಗಳೂರಿನಲ್ಲಿ ನೇತ್ರಾವತಿ ಅವರು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಒರ್ವ ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಈ ಪರೀಕ್ಷೆಯ ಮೇಲೆ ನಿಗಾ ವಹಿಸಲಿದ್ದಾರೆ ಹಾಗೂ ಅಭ್ಯರ್ಥಿ ಪರೀಕ್ಷೆ ಬರೆಯುವ ನ್ಯಾಯಾಲಯದಲ್ಲಿ ಅಗತ್ಯ ತುರ್ತು ವೈದ್ಯಕೀಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.