ಉಡುಪಿ, ನ 17 (DaijiworldNews/MS): ಉಡುಪಿಯ ತೃಪ್ತಿ ಲೇಔಟ್ ನಲ್ಲಿ ನಾಲ್ವರ ಕೊಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ಶೀಘ್ರವಾಗಿ ವಿಚಾರಣೆ ನಡೆಸಬೇಕು ಎಂದು ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಆಗ್ರಹಿಸಿದ್ದಾರೆ.
ಶುಕ್ರವಾರದಂದು ಉಸ್ತುವಾರಿ ಸಚಿವೆ ಲಕ್ಚ್ಮಿ ಹೆಬ್ಬಾಳ್ಕರ್ ಗೆ ಮನವಿ ನೀಡಿದ ಬಳಿಕ ಮಾತನಾಡಿದ ಅವರು "ಉಸ್ತುವಾರಿ ಸಚಿವರು ಬೇಗ ನ್ಯಾಯ ಕೊಡಿಸುವ ವಿಶ್ವಾಸ ಕೊಟ್ಟಿದ್ದಾರೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಒತ್ತಾಯಿಸಿದ್ದೇವೆ. ಅಡ್ವಕೇಟ್ ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಲು ಒತ್ತಾಯಿಸಿದ್ದೇವೆ. ಎಲ್ಲ ರೀತಿಯಲ್ಲಿ ಸಹಕಾರ ಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಕುಟುಂಬದ ಹಿರಿಯ ಪುತ್ರ ಅಸಾದ್ "ರಾಜ್ಯದಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಮಹಿಳೆಯರಿಗೆ ರಾಜ್ಯದಲ್ಲಿ ಭದ್ರತೆ ಬೇಕು. ಹಿಂದೂ ಮುಸ್ಲಿಂ ಎಲ್ಲ ಮಹಿಳೆಯರಿಗೂ ಭದ್ರತೆ ಬೇಕು. ಮಹಿಳೆಯರಿಗೆ ಹಿಂಸೆಯಾದರೆ ಹೇಳಿಕೊಳ್ಳುವ ಅವಕಾಶ ಬೇಕು. ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ಇದ್ದರೆ ಮಹಿಳೆಯರು ಹೇಳಿಕೊಳ್ಳುವುದಿಲ್ಲ. ಕೆಲಸದ ಸ್ಥಳದಲ್ಲಿ ಆಗುವ ತೊಂದರೆಗಳನ್ನು ಹೇಳಿಕೊಳ್ಳಲು ಮಹಿಳಾ ಸೆಲ್ ಬೇಕು. ಪ್ರಾಯಶ ನನ್ನ ತಂಗಿಗೆ ಆತ ಕಿರುಕುಳ ನೀಡಿರಬೇಕು. ಅವನು ಲೈನ್ ಕ್ರಾಸ್ ಮಾಡಿದ್ದಕ್ಕೆ ಮೊಬೈಲ್ ಬ್ಲಾಕ್ ಮಾಡಿರಬಹುದು. ಮನೆಯಲ್ಲಿ ಹೇಳುತ್ತಿದ್ದರೆ ನಾವು ಏನಾದರೂ ಕ್ರಮ ತೆಗೆದುಕೊಳ್ಳಬಹುದಿತ್ತು. ಕೆಲಸದ ಸ್ಥಳದಲ್ಲಿ ತೊಂದರೆಯಾಗುತ್ತಿದೆ ಎಂದರೆ ತಂದೆ ಹೋಗುವುದು ಬೇಡ ಎನ್ನುತ್ತಿದ್ದರು. ಹಾಗಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯರಿಗೆ ಅವಕಾಶ ಸಿಗಬೇಕು. ಮಹಿಳೆಯರು ಮನೆಯಲ್ಲಿ ಕುಳಿತುಕೊಳ್ಳುವುದು ಮದುವೆಯಾಗುವುದು ಮಾತ್ರ ಅಲ್ಲ ಕೆಲಸ ಮಾಡುವ ಅವಕಾಶ ಮಾಡಬೇಕು" ಎಂದು ಆಗ್ರಹಿಸಿದರು.
ಮೃತರ ಸಂಬಂಧಿ ಫಾತಿಮಾ ಅಸ್ಬಾ ಮಾತನಾಡಿ "ಆದಷ್ಟು ಶೀಘ್ರವಾಗಿ ನ್ಯಾಯ ಸಿಗಬೇಕು. ನಮಗೆ ಉಸಿರು ಕಟ್ಟಿದಂತಾಗಿದೆ. ಎಲ್ಲಾ ಮಹಿಳೆಯರಿಗೂ ಅಭದ್ರತೆ ಕಾಡುತ್ತಿದೆ. ನ್ಯಾಯ ಸಿಕ್ಕಿದ ನಂತರವೇ ನಾವು ಫ್ರೀ ಆಗುತ್ತೇವೆ. ಮಹಿಳೆಯರಿಗೆ ಭದ್ರತೆ ಬೇಕು. ಸಾಕ್ಷಿಗಳು, ಆಸುಪಾಸಿನ ಜನರಿಗೆ ಭಯ ಇದೆ. ಪೊಲೀಸರಿಂದ ನಮಗೆ ಭದ್ರತೆ ಬೇಕು. ಹಾಡುಹಗಲೇ ಬಂದು ಕೊಂದು ಹೋಗಿದ್ದಾನೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ನಮಗೆ ಹೆಲ್ಪ್ ಲೈನ್ ಮಾಡಿಕೊಡಬೇಕು. ಇದೇ ಮೊದಲು ಇದೇ ಕೊನೆಯಾಗಬೇಕು. ಮೃತ ಜೀವಗಳಿಗೆ ಗೌರವ ತೋರಿಸಿ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಬೇಡಿ. ಸುಳ್ಳು ಸುದ್ದಿ ಹಾಕಿದವರ ಮೇಲೆ ಕೇಸ್ ಹಾಕಬೇಕು. ಇದು ಮರಣ ಇದು ಜೋಕ್ ಅಲ್ಲ. ಸತ್ತವರ ಬಗ್ಗೆ ಏನೇನೋ ಅಪಪ್ರಚಾರ ಮಾಡಬೇಡಿ" ಎಂದು ವಿನಂತಿಸಿದರು.