ಉಡುಪಿ, ಎ16(Daijiworld News/SS): ಇಲ್ಲಿನ ರೈಲು ನಿಲ್ದಾಣದ ಪ್ಲ್ರಾಟ್ ಫಾರಂ ಮೇಲೆ ರೈಲು ಬರುವ ವೇಳೆ ನೃತ್ಯ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಇಬ್ಬರನ್ನು ರೈಲ್ವೇ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ರೈಲು ಚಲಿಸುವ ಸಂದರ್ಭದಲ್ಲಿ ಅಥವಾ ರೈಲ್ವೇ ಟ್ರ್ಯಾಕ್ ಮೇಲೆ ವೀಡಿಯೋ ಮಾಡುವುದು ಅಪಾಯಕಾರಿಯಾಗಿದ್ದು, ಹಲವಾರು ಮಂದಿ ರೈಲು ಢಿಕ್ಕಿ ಹೊಡೆದು ಅಥವಾ ರೈಲಿನಿಂದ ಬೀಳುವ ಮೂಲಕ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಅಪರಾಧಗಳು ರೈಲ್ವೇ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಇಬ್ಬರು ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ದೇಶದಲ್ಲಿ ಸಾಕಷ್ಟು ಜನರು ಟಿಕ್ಟಾಕ್ ಆ್ಯಪ್ಗೆ ಮನಸೋತಿದ್ದು, ಸೆಲೆಬ್ರಿಟಿಗಳು ಕೂಡ ಟಿಕ್ ವೀಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ಹರಿಯ ಬಿಡುತ್ತಿದ್ದಾರೆ. ಯುವ ಜನಾಂಗವನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವ ಜನಪ್ರಿಯ ಶಾರ್ಟ್ ವೀಡಿಯೋ ಸ್ಟ್ರೀಮಿಂಗ್ ಮೊಬೈಲ್ ಆಪ್ ಟಿಕ್ ಟಾಕ್ ಅನ್ನು ಈಗಾಗಲೇ ಕೆಲವೆಡೆ ಬ್ಯಾನ್ ಮಾಡಲಾಗಿದೆ.
ಸಾರ್ವಜನಿಕ ಹಿತಾಸಕ್ತಿಯಾಗಿ ದೂರೊಂದನ್ನು ಆಧರಿಸಿ ಇಂತಹ ಆಪ್ಗಳು ಯುವಕರ ಭವಿಷ್ಯ ಹಾಗೂ ಮಕ್ಕಳ ಮನೋಭಾವ ಹಾಳು ಮಾಡುತ್ತಿರುವುದರಿಂದ ದೇಶದಲ್ಲೂ ಕೂಡ ಟಿಕ್ ಟಾಕ್ ಡೌನ್ಲೋಡ್ ಮಾಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ಮಾಡಿದೆ.