ಮಂಗಳೂರು,ಏ 16(Daijiworld News/MSP): ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಯುವಜನರಿಗೆ ಭರವಸೆ ನೀಡಿ,ಅಧಿಕಾರಕ್ಕೇರಿದ ಬಳಿಕ ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗಿಸಿ,ಜಗತ್ತಿನ 60 ಕ್ಕೂ ಮಿಕ್ಕಿದ ದೇಶಗಳಿಗೆ ಪ್ರದಕ್ಷಿಣೆ ಹಾಕಿ ಶೋಕಿ ಜೀವನವನ್ನು ನಡೆಸಿದ ನರೇಂದ್ರ ಮೋದಿಯವರು, ಕಳೆದ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಠಿಸಬೇಕಾಗಿತ್ತು.
ಆದರೆ ಕೇವಲ 10 ಲಕ್ಷದಷ್ಟು ಮಾತ್ರ ಉದ್ಯೋಗ ಸೃಷ್ಠಿಸಿ ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿದೆ ಆದರೆ ಮೋದಿ ಸರಕಾರವು ಮಾತ್ರ ಯುವಜನರಲ್ಲಿ ಕೋಮು ಉನ್ಮಾದವನ್ನು,ಹುಸಿ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸಿ,ಯುವಜನರ ಬದುಕನ್ನೇ ನಾಶ ಮಾಡಲು ಹೊರಟಿದೆ ಎಂದು ಸಿಪಿಐಎಂ ದ.ಕ.ಜಿಲ್ಲಾ ಸಮಿತಿ ಸದಸ್ಯರೂ, ಜಿಲ್ಲಾ ಯುವಜನ ನಾಯಕರಾದ ಸಂತೋಷ್ ಕುಮಾರ್ ಬಜಾಲ್ ರವರು ಆತಂಕ ವ್ಯಕ್ತಪಡಿಸಿದರು.
ಅವರು ಬಜಾಲ್ ಪಕ್ಕಲಡ್ಕದಲ್ಲಿ ಜರುಗಿದ ಸಿಪಿಐಎಂಪಕ್ಷದ ಕಾರ್ಯಕರ್ತರ,ಹಿತೈಷಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ 5 ವರ್ಷಗಳ ಅವಧಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಕೋಟಿಗಟ್ಟಲೆ ಯುವಜನರು ಅರ್ಜಿ ಹಾಕಿರುವುದು ದೇಶದ ನಿರುದ್ಯೋಗ ಸಮಸ್ಯೆಯ ಕರಾಳತೆ ಕಣ್ಣಿಗೆ ರಾಚುವಂತಿದ್ದರೂ,ಕೇಂದ್ರ ಸಚಿವರಾದ ಅರುಣ್ ಜೇಟ್ಲೀಯವರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವೇ ಇಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಇಂತಹ ಯುವಜನ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ಹಿರಿಯ ಸದಸ್ಯರಾದ ಅಶೋಕ್ ಸಾಲ್ಯಾನ್ ರವರು ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐಎಂ ಮುಖಂಡರಾದ ಸುರೇಶ್ ಬಜಾಲ್,ದೀಪಕ್ ಬಜಾಲ್,ನಾಗರಾಜ್ ಬಜಾಲ್,ವರಪ್ರಸಾದ್ ಬಜಾಲ್ ರವರು ಉಪಸ್ಥಿತರಿದ್ದರು