ಉಳ್ಳಾಲ ನ 13 : ಸರಕಾರಿ ಬಸ್ಸು ಬಾರದೇ ಇದ್ದಲ್ಲಿ ಮುಂದೆ ವಾಹನಗಳನ್ನು ತಡೆದು, ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಡಿವೈ ಎಫ್ ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ.
ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪುವರೆಗೆ ಸರಕಾರಿ ಬಸ್ಸಿಗೆ ಒತ್ತಾಯಿಸಿ ಡಿವೈಎಫ್ ಐ ಮತ್ತು ನಾಗರಿಕರ ವತಿಯಿಂದ ತೌಡುಗೋಳಿ ಕ್ರಾಸಿನಲ್ಲಿ ಸೋಮವಾರ ನಡೆದ ಬೃಹತ್ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಜನಾಡಿ ಭಾಗದಲ್ಲಿ ಸರಕಾರಿ ಬಸ್ಸಿಗೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ, ಈ ಭಾಗದಲ್ಲಿ ಓಡುತ್ತಿರುವ ಖಾಸಗಿ ಬಸ್ಸು ಮಾಲೀಕರ ಲಾಭಿಯಿಂದ ಸರಕಾರಿ ಬಸ್ಸು ರಸ್ತೆಗೆ ಇಳಿಯುತ್ತಿಲ್ಲ. ಈ ಕೂಡಲೇ ಬಸ್ಸುಗಳನ್ನು ಹಾಕದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.
ಮಂಗಳುರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳು ತ್ವರಿತ ಅಭಿವೃದ್ಧಿಯನ್ನು ಕಾಣುತ್ತಿದೆ. ಈ ಭಾಗದಲ್ಲಿ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ ಹಾಗೂ ವಿವಿಧ ಉದ್ದಿಮೆಗಳು ನೆಲೆಯೂರಿವೆ. ಇದರಿಂದಾಗಿ ಈ ಭಾಗದಲ್ಲಿ ಜನದಟ್ಟಣೆಯೂ ಹೆಚ್ಚಿದ್ದು, ಈ ಭಾಗದಿಂದ ಅನೇಕ ಜನ ಕೆಲಸಕ್ಕೆ ಮತ್ತು ಶಿಕ್ಷಣಕ್ಕೆ ಮಂಗಳೂರಿಗೆ ಹೋಗುವವರಿದ್ದಾರೆ. ಆದರೆ ಖಾಸಗಿ ಬಸ್ಸುಗಳದ್ದೇ ಅಧಿಪತ್ಯ ಸದ್ಯ ಇದ್ದು, ಅವರಿಗೆ ಬೇಕಾದ ಹಾಗೆ ಟ್ರಿಪ್ ಗಳನ್ನು ಕಡಿತಗೊಳಿಸುವುದು, ಬಸ್ಸಿನ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹಾಕುವುದು ಮಾಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದರೂ ಬಸ್ಸು ನಿಲ್ಲದೇ ಹೋಗುವುದು, ಮಕ್ಕಳ ಶಾಲಾ ಕಾಲೇಜಿನ ಬ್ಯಾಗುಗಳನ್ನು ಕಂಡರೆ ಮಕ್ಕಳಿಗೆ ಬಯ್ಯುವ ಘಟನೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜನ ಹಲವು ವರ್ಷಗಳಿಂದ ಸರಕಾರಿ ಬಸ್ಸಿಗಾಗಿ ಹೋರಾಟ ನಡೆಸುತ್ತಿದ್ದರೂ, ವಿದ್ಯಾರ್ಥಿಗಳು, ಯುವಸಮುದಾಯ ಹಲವು ಬಾರಿ ಮನವಿ, ಹೋರಾಟಗಳನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರ ಸಹಿಯುಳ್ಳ ಮನವಿ ಪತ್ರವನ್ನು ಸಲ್ಲಿಸಿದರೂ ಈವರೆಗೆ ಸ್ಪಂಧನೆ ದೊರೆತಿಲ್ಲ. ಖಾಸಗಿ ಬಸ್ಸು ಮಾಲೀಕರ ಲಾಭಿಯಿಂದ ಸರಕಾರಿ ಬಸ್ಸು ಬಾರದಂತೆ ತಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಾಮಾಜಿಕ ಕಾರ್ಯಕರ್ತ ಆಲಿಕುಂಞಿ ಮೋಂಟುಗೋಳಿ, ಮುನೀರ್, ಹನೀಫ್, ವಿಶ್ವನಾಥ ಪೊಟ್ಟೊಳಿಕೆ, ನೌಸೀಫ್, ಆನಂದ, ಇರ್ಷಾದ್ ಪಡಿಕ್ಕಲ್, ಇಸ್ಮಾಯಿಲ್, ಕರ್ನಾಟಕ ರಕ್ಷಣಾ ವೇದಿಕೆಯ ಜಲೀಲ್ ಮುಡಿಪು, ಇಕ್ಬಾಲ್ ಮೊಂಟೆಪದವು ಮುಂತಾದವರು ಉಪಸ್ಥಿತರಿದ್ದರು.