ಮಂಗಳೂರು, ಎ16(Daijiworld News/SS): ಈ ಬಾರಿಯೂ ನಮಗೆ ಗೆಲ್ಲುವ ವಿಶ್ವಾಸವಿದೆ. ಮಂಗಳೂರಲ್ಲಿ ಮೋದಿ ಅಲೆಯಲ್ಲ, ಸುನಾಮಿ ಇದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮೋದಿಯವರಿಗೆ ಜನತೆ ನೀಡಿದ ಸ್ವಾಗತ ಅದ್ಭುತ. ಮಂಗಳೂರಲ್ಲಿ ಮೋದಿ ಅಲೆಯಲ್ಲ, ಸುನಾಮಿ ಇದೆ. ನರೇಂದ್ರ ಮೋದಿ ಆಡಳಿತಕ್ಕೆ ಕರಾವಳಿಯ ಜನತೆಯ ಬೆಂಬಲ ದೊರೆತಿದೆ. ಮೋದಿ ಆಡಳಿತ ಕರಾವಳಿ ಜಿಲ್ಲೆಯ ಜನ ಮೆಚ್ಚಿದ್ದಾರೆ. ಜನರ ವಿಶ್ವಾಸ ನಮಗೆ ಬೆಂಗಾವಲಾಗಿದೆ ಎಂದು ಹೇಳಿದರು.
ಮೋದಿಯ ಆಡಳಿತದ ಬಗ್ಗೆ ಮೆಚ್ಚುಗೆ ಹೊಂದಿರುವ ವಿದೇಶದಲ್ಲಿ ನೆಲೆಸಿರುವ 650 ಮತದಾರ ಮತದಾನಕ್ಕಾಗಿ ಊರಿಗೆ ಆಗಮಿಸಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮತದಾನವಾಗಲಿದೆ. ವಿರೋಧಿಗಳು ಶಸ್ತ್ರ ಸನ್ಯಾಸ ಮಾಡಿದ್ದಾರೆ. ನಮಗೆ ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಪ್ರಚಾರ ಮೂರು ತಿಂಗಳ ಹಿಂದೆಯೇ ಪೂರ್ವ ತಯಾರಿಯೊಂದಿಗೆ ಆರಂಭಗೊಂಡಿದೆ. ಅಭ್ಯರ್ಥಿ ಘೋಷಣೆ ಬಳಿಕ ನಾಲ್ಕು ಬಾರಿ ಕ್ಷೇತ್ರ ಪ್ರವಾಸ. ಕಾರ್ಯಕರ್ತರು ಮೂರು ಬಾರಿ ಮನೆಮನೆ ಭೇಟಿ ನೀಡಿದ್ದಾರೆ. ಕಳೆದ ಬಾರಿ ಆರಂಭಿಸಿದ ಪೇಜ್ ಪ್ರಮುಖ್ ಈ ಬಾರಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ, ನಾಲ್ಕು ಕಾಂಗ್ರೆಸ್ ಶಾಸಕರು ಇದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಎರಡನೇ ಬಾರಿ ಮೋದಿ ಅಲೆ ಇತ್ತು. ಬಿಜೆಪಿಯ ಓರ್ವ ಶಾಸಕರು ಮಾತ್ರ ಇದ್ದರು. ಈ ಬಾರಿ ಏಳು ಶಾಸಕರು, ಕಾರ್ಯಕರ್ತರು ಮಾತ್ರವಲ್ಲದೆ ಮತದಾರರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗೆಲುವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.