ಉಡುಪಿ, ನ 14 (DaijiworldNews/HR): ಸಂತೆಕಟ್ಟೆಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಕುಟುಂಬದ ಯಜಮಾನ ನೂರ್ ಮಹಮ್ಮದ್ ರೊಂದಿಗೆ ಗೃಹ ಸಚಿವ ಪರಮೇಶ್ವರ್ ಅವರು ಪೋನ್ ಕರೆ ಮೂಲಕ ಧೈರ್ಯ ನೀಡಿದ್ದಾರೆ.
ಆರೋಪಿಯನ್ನು ಶೀಘ್ರವೇ ಬಂದಿಸಿ ಜನರನ್ನು ಭಯದಿಂದ ಮುಕ್ತಿಗೊಳಿಸಿ. ಸ್ಥಳೀಯರು ಈ ಘಟನೆಯ ಬಳಿಕ ದೀಪಾವಳಿಯನ್ನು ಕೂಡಾ ಆಚರಣೆ ಮಾಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರಲ್ಲಿ ನೂರ್ ಮಹಮ್ಮದ್ ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಗೃಹ ಸಚಿವ ಪರಮೇಶ್ವರ್ ಅವರು ಎರಡು ದಿನಗಳ ಒಳಗೆ ಆರೋಪಿಯನ್ನು ಬಂಧಿಸುವ ಭರವಸೆ ನೀಡಿ, ನೂರ್ ಮಹಮ್ಮದ್ ಅವರಿಗೆ ಧೈರ್ಯ ನೀಡಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನೂರ್ ಮಹಮ್ಮದ್, ನಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇಂತಹ ಸುದ್ದಿಗಳನ್ನು ಹರಡಬೇಡಿ. ನಮಗೆ ಮನೆಯಿಂದ ಹೊರಗೆ ಬರಲು ಕೂಡಾ ಹೆದರಿಕೆಯಾಗುತ್ತಿದೆ. ಹೀಗಾಗಿ ಆರೋಪಿಯನ್ನು ಶೀಘ್ರವೇ ಬಂಧಿಸಿ. ಪೋಲಿಸರು ನಮಗೆ ಒಳ್ಳೆ ಸಹಕಾರ ನೀಡಿದ್ದಾರೆ, ಇನ್ನು ಮುಂದೆ ಕೂಡಾ ನಾವು ತನಿಖೆಗೆ ಸಹಕರಿಸುತ್ತೆವೆ. 15 ನಿಮಿಷದಲ್ಲಿ ಇಂತಹ ಕೃತ್ಯ ಆಗಿದೆ ಎಂದರೆ ಮನುಷ್ಯತ್ವ ಇಲ್ಲವೆ? ನನ್ನ ತಾಯಿ ಈಗ ಆರೋಗ್ಯವಾಗಿದ್ದಾರೆ ಅವರನ್ನು ಅವರ ಮನೆಗೆ ಕಳುಹಿಸಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಎಂಎಲ್ ಸಿ ಮಂಜುನಾಥ ಭಂಡಾರಿ, ಮತ್ತು ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.