ಗಂಗೊಳ್ಳಿ, ನ 14 (DaijiworldNews/MS): ಈ ಅಗ್ನಿ ಆಕಸ್ಮಿಕ ದೊಡ್ಡ ದುರ್ಘಟನೆ. ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಈ ಅಗ್ನಿ ದುರಂತದಲ್ಲಿ ಬೋಟುಗಳ ಮಾಲಿಕರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ವಿಮಾ ಸಂಸ್ಥೆಗಳು ಮತ್ತು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ, ವಿವೇಚನಾ ನಿಧಿಯ ಮೂಲಕ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕ ಸಚಿವರ ಜೊತೆ ಮಾತನಾಡಿ ಪರಿಹಾರ ಒದಗಿಸಲು ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಮಂಗಳವಾರ ಗಂಗೊಳ್ಳಿ ಬಂದರು ಸಮೀಪದ ಮ್ಯಾಂಗನೀಸ್ ರಸ್ತೆ ದೋಣಿ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಮೀನುಗಾರರಿಗೆ ಧೈರ್ಯತುಂಬಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಂಪೂರ್ಣ ನಷ್ಟ ಬೋಟ್ ಮಾಲಿಕರು ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ. ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮುಖ್ಯಮಂತ್ರಿಗಳಿಗೆ ಒಟ್ಟು ನಷ್ಟದ ವಿವರ ಸಲ್ಲಿಸಲಿದ್ದಾರೆ. ನಾನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ವಿಷಯ ಮನದಟ್ಟು ಮಾಡುತ್ತೇನೆ. ಈಗಾಗಲೇ ಮೀನುಗಾರಿಕ ಸಚಿವರು ಭೇಟಿ ನೀಡಿದ್ದಾರೆ. ಅವರು ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ ಎಂದರು.
ಮೀನುಗಾರರು ಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂಥಹ ಅವಘಡ ಸಂಭವಿಸಿದಾಗ ಅವರ ಜೀವನ ಇನ್ನಷ್ಟು ಪ್ರಪಾತಕ್ಕೆ ಇಳಿಯುತ್ತದೆ. 9 ಬೋಟುಗಳು ಮಾಲಿಕರು ಮಾತ್ರ ಇಲ್ಲಿ ಸಂತೃಸ್ತರಲ್ಲ ಇದನ್ನೇ ನಂಬಿಕೊಂಡ ನೂರಾರು ಕಾರ್ಮಿಕರು ಕೂಡಾ ಅತಂತ್ರರಾಗಿದ್ದಾರೆ. ಬೋಟ್ ಗಳನ್ನು ಕಳೆದುಕೊಂಡ ಬೋಟ್ ಮಾಲಿಕರ ಪರವಾಗಿ ಸರಕಾರವಿದೆ. ಕಾಂಗ್ರೆಸ್ ಪಕ್ಷವಿದೆ. ಸೂಕ್ತ ಸ್ಪಂದನೆ ಖಂಡಿತ ಮಾಡುತ್ತೇವೆ ಎಂದರು.
ಗಂಗೊಳ್ಳಿಯಲ್ಲಿ ಅಗ್ನಿಶಾಮಕ ವ್ಯವಸ್ಥೆ ಬೇಕು ಎನ್ನುವುದು ಈ ಭಾಗದ ಬೇಡಿಕೆ. ಈ ಬಗ್ಗೆ ಗೃಹಸಚಿವರೊಂದಿಗೆ ಮಾತನಾಡಿ ಸದ್ಯಕ್ಕೆ ತಾತ್ಕಾಲಿಕ ನೆಲೆಯಲ್ಲಿ ಅಗ್ನಿಶಾಮಕ ಘಟಕ ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇಲ್ಲಿ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಎಂ.ಎ ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಬಾಬು ಹೆಗ್ಡೆ ಸಂಪಿಗೇಡಿ ಸಂಜೀವ ಶೆಟ್ಟಿ, ಉದಯಕುಮಾರ್ ಶೆಟ್ಟಿ ವಂಡ್ಸೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸದಾಶಿವ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ಉದಯ ಪೂಜಾರಿ, ಮಂಜುಳ ದೇವಾಡಿಗ, ದುರ್ಗಾರಾಜ ಪೂಜಾರಿ, ಸುರೇಂದ್ರ ಖಾರ್ವಿ, ಮುಜಷಿದ್, ಸಂತೋಷ್ ಹಾಗೂ ಸ್ಥಳೀಯ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು