ಮಂಗಳೂರು, ಏ 16(Daijiworld news/MSP): ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿಗೆ ಸಾಮಾನ್ಯವಾಗಿ ಇಲಾಖೆಯಿಂದ ಟೂತ್ ಪೇಸ್ಟ್, ಬ್ರಷ್, ಸೋಪ್, ಶಾಂಪೂ ಕೊಡುವುದು ವಾಡಿಕೆ. ಆದರೆ ಈ ಬಾರಿ ನಗರ ವ್ಯಾಪ್ತಿಯ ಮತಗಟ್ಟೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ 1500 ಮಂದಿ ಇಲಾಖಾ ಸಿಬ್ಬಂದಿಗಳಿಗೆ ಮತ್ತು ಗೃಹರಕ್ಷಕ ಸಿಬ್ಬಂದಿಗೆ ವಿಶೇಷ ಕಿಟ್ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ವಿಧಾನ ಸಭಾ ಕ್ಷೇತ್ರಗಳು ಬರುತ್ತಿದ್ದು, ಒಟ್ಟು 883 ಮತಗಟ್ಟೆಗಳಿವೆ. 20 ಸೂಕ್ಷ್ಮ ಮತಗಟ್ಟೆಗಳ ಪೈಕಿ 156 ಮತಗಟ್ಟೆಗಳಿಗೆ ಕೇಂದ್ರಿಯ ಪಡೆಗಳ ಭದ್ರತೆ ಕೂಡಾ ಇದ್ದು, ಇನ್ನುಳಿದ ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್ವರ್ ಮತ್ತು ವೀಡಿಯ ಒಬ್ಸರ್ ವರ್ರವರ ಕಣ್ಗಾವಲು ಇದೆ. ಚುನಾವಣೆ ಬಂದೋಬಸ್ತು ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್ಸ್ಪೆಕ್ಟರ್ 16, ಪಿಎಸ್ಐ 7, ಎಎಸ್ಐ 79, ಎಚ್ಸಿ/ಪಿಸಿ ಮತ್ತು ಹೋಂಗಾರ್ಡ್ ಸಹಿತ ಒಟ್ಟು 1500 ಪೊಲೀಸರು ಹಾಗೂ ಕೇಂದ್ರಿಯ ಪಡೆಯ 2 ಕಂಪನಿ ಮತ್ತು 8 ಕೆಎಸ್ಆರ್ಪಿ 12 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಹೀಗೆ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 1500 ಪೊಲೀಸರಿಗೂ ವಿಶೇಷ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಈ ವಿಶೇಷ ಕಿಟ್ ನಲ್ಲಿ ಬಿಸ್ಕೆಟ್, ಟೂತ್ ಪೇಸ್ಟ್, ಬ್ರಷ್, ಸೋಪ್, ಬೆಂಕಿ ಪೊಟ್ಟಣ, ಕ್ಯಾಂಡಲ್, ಶೇವಿಂಗ್ ಸೆಟ್, ಸೊಳ್ಳೆ ನಿರೋಧಕ ಔಷಧ ಒಳಗೊಂಡಿದೆ.