ಉಡುಪಿ, ಏ 16(Daijiworld News/MSP): "ಜವಾಬ್ದಾರಿಯುತ ಸಂಸದೆ ಸ್ಥಾನದಲ್ಲಿದ್ದುಕೊಂಡು, ಅವರ ಕ್ಷೇತ್ರ ವ್ಯಾಪ್ತಿಯಾದ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಮಾಡದೇ ಕೊನೆಯ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಶೋಭಾ ಕರಂದ್ಲಾಜೆ ಅವರಿಗೆ ಎಳ್ಳಷ್ಟು ಪಾಪಾ ಪ್ರಜ್ಞೆ ಇಲ್ಲ" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ ಜಯಮಾಲ ಅವರು ಹಾಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ವಿರುದ್ದ ವಾಗ್ದಾಳಿ ನಡೆಸಿದರು.
ಅವರು ಉಡುಪಿಯಲ್ಲಿ ದಾಯ್ಜಿವರ್ಲ್ಡ್ ವಾಹಿನಿ ಯೊಂದಿಗೆ ಮಾತುಕತೆ ನಡೆಸಿ, "ಶೋಭಾ ಕರಂದ್ಲಾಜೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನೀಡಿ ಅವರ ಪಕ್ಷವೂ ತಪ್ಪು ಸಂದೇಶವನ್ನು ಸಮಾಜಕ್ಕೆ , ಯುವ ಜನಾಂಗಕ್ಕೆ ರವಾನಿಸಿದ್ದಾರೆ. ಅಭಿವೃದ್ದಿ ಕಾರ್ಯಗಳನ್ನು ನಡೆಸಿ, ಜನರ ಬಳಿ ಮತ ಯಾಚಿಸಿದರೆ ಅದಕ್ಕೆ ಬೆಲೆ ಇದೆ. ಆದರೆ ಯಾವುದೇ ಕೆಲಸ ಮಾಡದೇ ಎಳ್ಳಷ್ಟೂ ಪಾಪ ಪ್ರಜ್ಞೆ ಇಲ್ಲದೆ ಮತ ಯಾಚಿಸುತ್ತಾರಲ್ಲವೇ ?" ಎಂದು ಶೋಭಾ ನಡೆಯನ್ನು ಟೀಕಿಸಿದರು.
ಇದೇ ವೇಳೆ ಪ್ರಮೋದ್ ಮಧ್ವರಾಜ್ ಪರ ಬ್ಯಾಟಿಂಗ್ ನಡೆಸಿದ ಸಚಿವೆ ಜಯಮಾಲಾ, "ಪ್ರಮೋದ್ ಎರಡು ಪಕ್ಷಗಳ ಒಮ್ಮತದಿಂದ ಆಯ್ಕೆಯಾಗಿರುವ ಸಮರ್ಥ ಅಭ್ಯರ್ಥಿ. ಉಡುಪಿ ಶಾಸಕರಾಗಿ, ರಾಜ್ಯ ಸರ್ಕಾರದ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಹೀಗೆ ಉಭಯ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಅಭಿವೃದ್ದಿ ಕಾರ್ಯಗಳೇ ಪ್ರಮೋದ್ ಮದ್ವರಾಜ್ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಲಿದೆ" ಎಂದರು.
ಈ ಸಂದರ್ಭ ಬಿಜೆಪಿ ವಿರುದ್ದ ಕಿಡಿಕಾರಿದ ಅವರು, "ಬಿಜೆಪಿಯು ದಿನಕ್ಕೊಂದು ತಂತ್ರ ಹೂಡುತ್ತಿದ್ದು ಪ್ರತಿ ಹಂತದಲ್ಲೂ ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸಲೇ ಬೇಕೆಂದು ಪಣ ತೊಟ್ಟಿದೆ ಆದರೆ ನಮ್ಮ ಮೈತ್ರಿ ಸರ್ಕಾರ ದಿನದಿನಕ್ಕೆ ಸರಕಾರ ಮತ್ತಷ್ಟು ಬಲಿಷ್ಟವಾಗುತ್ತಿದೆ. ರಾಜಕೀಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ನಿಜ ಆದರೆ ಬಿಜೆಪಿ ತಾವೇ ಗೆಲ್ಲಬೇಕೆಂದು ಎಲ್ಲಾ ರೀತಿಯ ಕುತಂತ್ರ ಮಾಡುತ್ತಿದೆ" ಎಂದು ಆರೋಪಿಸಿದರು.
ಮುಂದುವರಿಸಿ ಮಾತನಾಡಿದ ಅವರು , "ಮೋದಿ ಸರಕಾರ , ರೈತರನ್ನು, ಹೆಣ್ಣುಮಕ್ಕಳನ್ನು, ಯುವಕರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಅಭಿವೃದ್ದಿ , ಉದ್ಯೋಗಸೃಷ್ಟಿ ಮುಂತಾದ ವಿಚಾರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಮೋದಿ ಉಳ್ಳವರ ಪರ ಯೋಚನೆ ಮಾಡಿದ್ದಾರೆ, ಬಡವರ ಪರ ಅಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.