ಮಂಗಳೂರು, ನ.13 (DaijiworldNews/SK): ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬಹುತೇಕ ತಾಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಪ್ರಸ್ತುತ ಮುಂಗಾರು ಹಾಗೂ ಹಿಂಗಾರು ಮಳೆ ಎರಡೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ರೈತರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಸರಾಸರಿ 85.2 ಸೆಂಟಿಮೀಟರ್ ಮಳೆಯಾಗುತಿತ್ತು. ಆದರೆ, ಈ ಬಾರಿ ತಾಲ್ಲೂಕುಗಳಲ್ಲಿ ಸರಾಸರಿ 63.5 ಸೆಂಟಿಮೀಟರ್ ಮಳೆಯಾಗಿದ್ದು, ಶೇ.25 ರಷ್ಟು ಕಡಿಮೆಯಾಗಿದೆ.
ಇದರಿಂದ ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಪ್ರತಿ ಬಾರಿಯೂ ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಬಹುತೇಕ ಕಡೆ ಉತ್ತಮ ಹಿಂಗಾರು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯಭಾರ ಕುಸಿತದ ಪರಿಣಾಮವಾಗಿ ರಾಜ್ಯಕ್ಕೆ ಹಿಂಗಾರು ಮಳೆಯ ಪ್ರವೇಶ ವಿಳಂಬವಾಯಿತು. ಆದರೆ ಬಂದ ಹಿಂಗಾರು ಕೂಡ ಅಗತ್ಯದಷ್ಟು ಸರಿಯಾದ ಮಟ್ಟದಲ್ಲಿ ಸುರಿದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನು ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ ಮುಂಗಾರು ನಂತರದ ಮಳೆಯಾಗುವ ಸಾಧ್ಯತೆ ಇದ್ದು, ನವೆಂಬರ್ ಮೊದಲ ಎರಡು ವಾರಗಳಲ್ಲಿ ಮಳೆಯಾದರೆ, ತಿಂಗಳ ಕೊನೆಯಲ್ಲಿ ರಾಜ್ಯವು ಉತ್ತಮ ಮಳೆಯನ್ನು ನಿರೀಕ್ಷಿಸಬಹುದು ಎಂದು IMD ಮೂಲಗಳು ತಿಳಿಸಿದೆ.