ಸುಳ್ಯ, ನ 12 (DaijiworldNews/RA): ಸುಳ್ಯದ ಜಾಲ್ಸೂರು- ಕಾಸರಗೋಡು ಅಂತಾರಾಜ್ಯ ರಸ್ತೆಯ ಪಂಜಿಕಲ್ಲಿನಲ್ಲಿ ಮತ್ತೆ ಕಾಡಾನೆಯ ಹಿಂಡುಗಳು ಶನಿವಾರ ಮತ್ತೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರದಂದು ಇದೇ ಭಾಗದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು ಸಾರ್ವಜನಿಕರು ಮತ್ತು ವಾಹನ ಸವಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಮತ್ತೆ ಶನಿವಾರ ಬೆಳಗ್ಗೆ ಅದೇ ಪರಿಸರದಲ್ಲಿ ಒಂದು ಮರಿಯಾನೆ ಸಹಿತ ಒಟ್ಟು ಏಳು ಕಾಡಾನೆಗಳು ಪತ್ತೆಯಾಗಿವೆ ಎಂದು ಸಾರ್ವನಿಕರು ಮಾಹಿತಿ ನೀಡಿದ್ದಾರೆ.
ಹಗಲು ಹೊತ್ತಿನಲ್ಲಿ ಅರಣ್ಯ ಪ್ರದೇಶ ದಲ್ಲಿರುವ ಕಾಡಾನೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ, ಮಂಡೆಕೋಲು ಗ್ರಾಮದ ದೇವರಗುಂಡ, ಮುರೂರು, ಪಂಜಿಕಲ್ಲು ಗಡಿಭಾಗದಲ್ಲಿ ಸಂಚರಿಸಿ, ಕೃಷಿಕರ ತೋಟದಲ್ಲಿ ಹಾನಿ ಮಾಡುತ್ತಿದ್ದು, ಈಗಾಗಲೇ ಈ ಭಾಗದ ಹಲವಾರು ತೋಟಗಳಲ್ಲಿ ಹಾನಿ ಮಾಡಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇತ್ತ ಸಮೀಪದ ಕಡಬ ಸಿರಿಬಾಗಿಲು ಗ್ರಾಮದ ರೆಂಜಾಳ, ಪೆರ್ಜೆ ಮುಂತಾದ ಪ್ರದೇಶಗಳಲ್ಲಿ ಆನೆಗಳ ಅಟ್ಟ ಹಾಸ ಎಲ್ಲೆ ಮೀರಿದ್ದು ಕೃಷಿಗಳನ್ನು ನಾಶ ಮಾಡಿ ನಷ್ಟ ಉಂಟು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಿಟ್ಟಿನಲ್ಲಿ ತಾವು ಬೆಳೆದ ಬೆಳೆಗೆ ಹಾನಿಯಾಗಿದ್ದಕ್ಕೆ ಸೂಕ್ತ ಪರಿಹಾರ ಹಾಗು ತಮ್ಮ ಪ್ರಾಣಕ್ಕೆ ರಕ್ಷಣೆ ನೀಡುವಂತೆ ಸ್ಥಳೀಯ ನಿವಾಸಿಗಳು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.