ಮಂಗಳೂರು, ನ 12 (DaijiworldNews/MS): ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ 25 ಮರಳು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಆ ಪೈಕಿ 24 ಮರಳು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ. ಮುಂಗಾರಿನ ಕಾರಣಕ್ಕೆ ಪರಿಸರ ವಿಮೋಚನಾ ಪತ್ರದಲ್ಲಿ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಜೂನ್ನಿಂದ ಅಕ್ಟೋಬರ್ 15 ರವರೆಗೆ ಮರಳು ತೆಗೆಯಲು ನಿರ್ಬಂಧವಿರುತ್ತದೆ. ಆದರೆ ಮಾನ್ಸೂನ್ ಅವಧಿಯಲ್ಲಿ ಈ ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ಸ್ಟಾಕ್ಯಾರ್ಡ್ಗಳಲ್ಲಿ ಸುಮಾರು 1,02,467 ಮೆಟ್ರಿಕ್ ಟನ್ ಮರಳು ದಾಸ್ತಾನು ಲಭ್ಯವಿದ್ದು, ಇಲ್ಲಿಯವರೆಗೆ 27,023 ಮೆ.ಟನ್ ಪ್ರಮಾಣದ ಮರಳು ಜಿಲ್ಲೆಯಲ್ಲಿನ ಕಾಮಗಾರಿಗಳಿಗೆ ಪೂರೈಕೆಯಾಗಿದ್ದು, ಇನ್ನೂ 75,444 ಮೆ.ಟನ್ ಪ್ರಮಾಣದ ಮರಳು ಸ್ಟಾಕ್ಯಾರ್ಡ್ಗಳಲ್ಲಿ ಲಭ್ಯವಿದ ಎಂದು ಗಣಿ ಇಲಾಖೆ ಹೇಳಿದೆ.
ಜಿಲ್ಲೆಯಲ್ಲಿ ನೆಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಪೂರೈಕೆಯಾಗದೆ ಅಡಚಣೆ ಉಂಟಾಗಬಾರದೆಂಬ ಉದ್ದೇಶದಲ್ಲಿ ಮರಳು ಗುತ್ತಿಗೆದಾರರುಗಳಿಗೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳಂತೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಕರಾವಳಿ ನಿಯಂತ್ರಣ ವಲಯದಲ್ಲಿ ವಾಡಿಕೆಯಂತೆ ಮೇ ತಿಂಗಳಲ್ಲಿ ಮರಳು ದಿಬ್ಬಗಳನ್ನು ಗುರುತಿಸುವ ಕಾರ್ಯ ಕೈಗೊಂಡು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆ ದಿನಾಂಕ 08-11-2011 ರಂತೆ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಹರಿಯುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಕ್ರಮವಾಗಿ 4 ಮತ್ತು 5 ಮರಳು ದಿಬ್ಬಗಳನ್ನು ಗುರುತಿಸಿದೆ. ಈ 9 ಮರಳು ದಿಬ್ಬಗಳಲ್ಲಿ 3,00,965 ಮೆ.ಟನ್ ಮರಳನ್ನು ತೆರವುಗೊಳಿಸುವ ಸಂಬಂಧ ಜಿಲ್ಲಾ ಕರಾವಳಿ ವಲಯ ನಿಯಂತ್ರಣ ಸಮಿತಿಯು ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ ಪಡೆಯಲು ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಅನುಮೋದನೆಗೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿರುತ್ತದೆ.
ನಾನ್ ಸಿಆರ್ಝಡ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮರಳು ಗುತ್ತಿಗೆದಾರರು ದಿ. 30ರಂದು ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳು 1994 ರ ನಿಯಮ 31-ವೈ ರಂತೆ ವಾರ್ಷಿಕ ಉಪ ಖನಿಜದ ಉತ್ಪಾದನೆಯ ಶೇಕಡ 50 ರಷ್ಟು ಖನಿಜ ಉತ್ಪಾದನೆ ಮಾಡಿ ಸಾಗಾಟ ಮಾಡುವಂತೆ ಕಡ್ಡಾಯವಿರುವ ನಿಯಮವನ್ನು ಸಡಿಲಗೊಳಿಸಬೇಕು ಮತ್ತು ಜಿಲ್ಲೆಯಲ್ಲಿ ಮರಳಿನ ಬೇಡಿಕೆ ಕಡಿಮೆಯಿರುವುದರಿಂದ ಅಂತರ್ ಜಿಲ್ಲಾ ಮರಳು ಸಾಗಾಟಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸಲು ಕೋರಿಕೊಂಡಿದ್ದಾರೆ. ಇದು ಜಿಲ್ಲೆಯಲ್ಲಿ ಮರಳು ಸಾಕಷ್ಟು ಲಭ್ಯವಿದ್ದು, ಮರಳು ಅಭಾವ ಇಲ್ಲದಿರುವುಕ್ಕೆ ಕೈಗನ್ನಡಿಯಾಗಿದೆ. ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.