ಪುತ್ತೂರು, ನ 10 (DaijiworldNews/HR): ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆಯುತ್ತಿದ್ದ ಘಟನೆ ನಡೆದಿದ್ದು, ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು ಎನ್ನಲಾಗಿದೆ.
ಇನ್ನು ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಟ್ಸಾಪ್ ಗ್ರೂಪ್ನಲ್ಲಿ ನಡೆದ ಚರ್ಚೆಯ ಕೋಪದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಾಡಹಗಲೇ ತಲವಾರು ಹಿಡಿದುಕೊಂಡಿರುವ ಸಾರ್ವಜನಿಕರಲ್ಲಿ ಆತಂಕ ಕಾರಣವಾಗಿದೆ.