ಉಡುಪಿ, ನ 10 (DaijiworldNews/PC): ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 81 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡಿದ್ದು ಸುಮಾರು 12,400 ರೂ. ದಂಡ ವಿಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ನ. 9 ರಂದು ಉಡುಪಿಯ ಆದಿ ಉಡುಪಿ ಸಂತೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ,ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಸೂಚಿಸಲಾಯಿತು.
ಉಡುಪಿಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ರೆಡ್ಯೂಸ್, ರೀಯೂಸ್, ರಿಸೈಕಲ್ ಮಾದರಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.
ವಿವಿಧ ಸಮಾರಂಭಗಳಲ್ಲಿ ಹಾಗೂ ರಸ್ತೆ ಬದಿಯ ಆಹಾರದ ಅಂಗಡಿಗಳಲ್ಲಿ ಮರುಬಳಕೆಯ ವಸ್ತುಗಳನ್ನು ಬಳಸಬೇಕೆಂದು ಮಾಹಿತಿಯನ್ನು ನೀಡಿದರು. ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಉಡುಪಿ ಪೌರಾಯುಕ್ತರು ಮನವಿ ಮಾಡಿದರು.
ಉಡುಪಿ ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್ವೈಸರ್ ಗಳು ಹಾಗೂ ಪೌರಕಾರ್ಮಿಕರು ಅನಿರೀಕ್ಷಿತ ದಾಳಿ ನಡೆಸುತ್ತಿದ್ದು, ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸುವುದರೊಂದಿಗೆ ದಂಡ ಸಹ ವಿಧಿಸಲಾಗುವುದು ಎಂದು ಪ್ರಕಟನೆ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.