ಮಂಗಳೂರು, ನ 9 (DaijiworldNews/SK): ಮಂಗಳೂರಿನ ಪ್ರಸಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿರುವ ಒಂದು ಜತೆ ತೋಳವನ್ನು ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮೃಗಾಲಯದಿಂದ ತರಿಸಲಾಗಿದೆ.
ಹೊಸ ಜಗತ್ತಿನ ಮಂಗಗಳೆಂದೆ ಕರೆಯಲ್ಪಡುವ 4 ಜತೆ ಅಳಿಲು ಮಂಗ ಮಾರ್ಮಸೆಟ್, ಟಾಮರಿಂನ್ ಗಳು ಕೂಡಾ ಸೇರ್ಪಡೆಯಾಗಿದ್ದು, ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್, ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ, ದಕ್ಷಿಣ ಆಫ್ರಿಕಾ ಖಂಡದ ಟುರಾಕೋ ಪಕ್ಷಿಗಳನ್ನು ಕೂಡಾ ಪಿಲಿಕುಳಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
ಹೊಸತಾಗಿ ಸೇರ್ಪಡೆಯಾದ ಪ್ರಾಣಿ, ಪಕ್ಷಿಗಳು ಉದ್ಯಾನವನದ ಮೆರುಗನ್ನು ಹೆಚ್ಚಿಸಿದ್ದು, ಇನ್ನು ಇವುಗಳಿಗೆ ಆವರಣ ಸಮುಚ್ಚಯ ನಿರ್ಮಿಸಲು ರಿಲಾಯನ್ಸ್ ಫೌಂಡೇಶನ್ ಒಂದು ಕೋಟಿ ರೂ. ದೇಣಿಗೆ ನೀಡಿದೆ. ಜೊತೆಗೆ ಹೊಸತಾಗಿ ಸೇರ್ಪಡೆಯಾದ ಪ್ರಾಣಿ ಪಕ್ಷಿಗಳಿಗೆ ಹೊಂದುವಂತಹ ನೈಸರ್ಗಿಕ ವಾತವರಣ ಸೃಷ್ಥಿಸಲಾಗಿದೆ. ಆವರಣದ ಒಳಗೆ ಪ್ರಾಣಿಗಳಿಗಾಗಿ, ಆಹಾರ ನೀಡುವ ಕೇಂದ್ರ, ಬ್ರೀಡಿಂಗ್ ಬಾಕ್ಸ್ ಇತ್ಯಾದಿ ಸಲಕರಣೆಗಳನ್ನು ಲೈಫ್ ಸೈನ್ಸ್ ಎಜುಕೇಶನ್ ಟ್ರಸ್ಟ್, ಬೆಂಗಳೂರು ಇವರು ನೀಡಿದ್ದಾರೆ. ಈಗಾಗಲೇ ಪಿಲಿಕುಳ ಮೃಗಾಲಯದಲ್ಲಿ 1,200 ಹೆಚ್ಚು ವಿವಿಧ ತಳಿಯ ಪ್ರಾಣಿ, ಪಕ್ಷಿ ಉರಗಗಳಿದ್ದು, ಇನ್ನು ಹೊಸ ಪ್ರಾಣಿಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಚ್.ಜೆ. ಭಂಡಾರಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.