ಉಡುಪಿ, ಎ16(SS): ಕೆಲಸ ಮಾಡಿದವರನ್ನು ದಿಲ್ಲಿಗೆ ಕಳಿಸಿ, ಕೆಲಸ ಮಾಡದ ನಿಷ್ಕ್ರಿಯ ಸಂಸದರನ್ನು ಮನೆಗೆ ಕಳಿಸಿ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಸಂಸದರು ಕಳೆದ ಐದು ವರ್ಷಗಳಿಂದ ನಿಷ್ಕ್ರಿಯರಾಗಿದ್ದು, ಕೇಂದ್ರ ಸರಕಾರದ ಅನುದಾನದಿಂದ ಕಾಪು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಗೋಬ್ಯಾಕ್ ಘೋಷಣೆಗೆ ಒಳಗಾದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಇಡೀ ಕ್ಷೇತ್ರದಲ್ಲಿ ಮತದಾರರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಶಾಸಕ, ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಕೈಗೆ ಸಿಗುವ ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಕ್ಷೇತ್ರದಲ್ಲಿ ಸಂಸದರಿಂದ ಯಾವ ಕೆಲಸವೂ ಆಗಿಲ್ಲ. ಪ್ರಮೋದ್ ಮಧ್ವರಾಜ್ ಸಮರ್ಥ ಅಭ್ಯರ್ಥಿಯಾಗಿದ್ದು, ಅವರನ್ನು ಗೆಲ್ಲಿಸಿ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸದ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ವಿರುದ್ಧ ಅಲೆ ಇದ್ದು ಪ್ರಮೋದ್ ಮಧ್ವರಾಜ್ ಅತ್ಯಧಿಕ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.