ಕಾಸರಗೋಡು, ನ 09 (DaijiworldNews/MS): ಕಳ್ನಾಡ್ ಅರಮಂಗಾಣದ ಶಿಕ್ಷಕಿ ವೃತ್ತಿಯಲ್ಲಿದ್ದ ಮಹಿಳೆ ಮತ್ತು ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಶಿಕ್ಷಕನೋರ್ವ ನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉದುಮ ಬಾರ ನಿವಾಸಿ ಸಫ್ವಾನ್ (29) ಬಂಧಿತ ಆರೋಪಿ. ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಸಾಕ್ಷ್ಯ ನಾಶ ಮೊಕದ್ದಮೆ ಹೂಡಲಾಗಿದೆ. ಸೆಪ್ಟೆಂಬರ್ 15 ರಂದು ಘಟನೆ ನಡೆದಿತ್ತು.
ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದ ರುಬೀನಾ ಹಾಗೂ ಈಕೆಯ ಐದು ವರ್ಷದ ಪುತ್ರಿ ಹನಾನ್ ಮರಿಯಾಳ ಮೃತ ದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು. ಇಬ್ಬರು ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದಾಗ ಬಾವಿಯಿಂದ ಮೃತ ದೇಹ ಪತ್ತೆಯಾಗಿತ್ತು. ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ರುಬೀನಾಳ ಪತಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸಂಬಂಧಿಕರು, ಕುಟುಂಬಸ್ಥರು ಮೊದಲಾದವರಿಂದ ಮಾಹಿತಿ ಕಲೆ ಹಾಕಲಾಗಿತ್ತು. ಈ ನಡುವೆ ಈಕೆ ಕಳೆದ 9 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿರುವ ಉದುಮ ಬಾರ ನಿವಾಸಿಯಾದ ಶಿಕ್ಷಕನ ಜೊತೆ ಪ್ರೀತಿಯಲ್ಲಿದ್ದುದು ಕಂಡು ಬಂದಿದೆ. ಇದರ ನಡುವೆ ಶಿಕ್ಷಕ ಬೇರೆ ಯುವತಿ ಜೊತೆ ವಿವಾಹಕ್ಕೆ ತೀರ್ಮಾನಿಸಿದ್ದು, ಬಳಿಕ ಇಬ್ಬರ ನಡುವೆ ವಿರಸ ಉಂಟಾಗಿ ರುಬೀನಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೊಬೈಲ್ ಗಳನ್ನು ಪೊಲೀಸರು ತಪಾಸಣೆಗೊಳಪಡಿಸಿದ್ದು, ಇದರಲ್ಲಿ ಇಬ್ಬರ ನಡುವಿನ ಪರಸ್ಪರ ಚಾಟಿಂಗ್ ಡಿಲೀಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಸಾಕ್ಷ್ಯ ನಾಶ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬುಧವಾರ ಅರೋಪಿಯನ್ನು ಠಾ ಣೆ ಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ.
ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.