ಮಂಗಳೂರು, ನ 09 (DaijiworldNews/MS): ಯೋಜನೆಗಾಗಿ ಭೂಮಿ ಕಳೆದುಕೊಂಡ ನಿರ್ವಸಿತರಿಗೆ ಉದ್ಯೋಗ ನೀಡಿ ಮುಂದುವರಿಸುವ ಬಗ್ಗೆ ಡಿಸೆಂಬರ್ 1ರೊಳಗೆ ಕ್ರಮ ಕೈಗೊಳ್ಳುವಂತೆ ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ಗೆ (ಹಿಂದಿನ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಸೂಚನೆ ನೀಡಲಾಗಿದೆ.
ಎಂ.ಎಸ್.ಇ.ಝಡ್ ಯೋಜನೆಗಾಗಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಉದ್ಯೋಗ ನೀಡುವ ಕುರಿತು ಮಂಗಳವಾರ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ವರ್ಚುವೆಲ್ ಸಭೆಯಲ್ಲಿ ಈ ಬಗ್ಗೆ ನಿರ್ದೇಶಿಸಲಾಗಿದೆ.
ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಜಿಎಂಪಿಎಲ್) ನಲ್ಲಿ ನಿರ್ವಸಿತರಿಗೆ ಉದ್ಯೋಗದ ಮುಂದುವರಿಕೆಯ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿತು, ನಿರ್ವಸಿತರಿಗೆ ಉದ್ಯೋಗ ನೀಡುವುದು ಜಿಎಂಪಿಎಲ್ ಸಂಸ್ಥೆಯ ಬಾಧ್ಯತೆಯಾಗಿದೆ. ಭೂಸ್ವಾಧೀನ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಯೋಜನೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಕರ್ನಾಟಕ ಸರಕಾರವು ಭರವಸೆ ನೀಡಿತ್ತು. ನೇಮಕಾತಿ ನಿಯಮಗಳನ್ನು ಮುಂದಿಟ್ಟು ಉದ್ಯೋಗ ನಿರಾಕರಿಸುವುದು ಸರಿಯಲ್ಲ. ಎಂ.ಆರ್.ಪಿ.ಎಲ್ ಮತ್ತು ಐ.ಎಸ್.ಪಿ.ಆರ್.ಎಲ್. ನಂತಹ ಸಾರ್ವಜನಿಕ ಉದ್ಯಮಗಳು ಯಾವುದೇ ಆಯ್ಕೆ ಮಾನದಂಡಗಳಿಲ್ಲದೆ ನಿರ್ವಸಿತರಿಗೆ ಉದ್ಯೋಗ ನೀಡಿವೆ. ಇದೇ ಆಧಾರದಲ್ಲಿ ನಿರ್ವಸಿತರ ಉದ್ಯೋಗ ಸಮಸ್ಯೆ ಬಗೆಹರಿಸಲು ಸಭೆ ಗೈಲ್ ಅಧಿಕಾರಿಗಳಿಗೆ ಸೂಚಿಸಿತು. ಡಿಸೆಂಬರ್ ಒಂದ ರೊಳಗೆ ಉದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಮಯವನ್ನು ನೀಡಲಾಯಿತು.
ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಎಂ.ಎಸ್.ಇ.ಝಡ್ ಅಭಿವೃದ್ಧಿ ಆಯುಕ್ತೆ ಹೇಮಲತಾ. ಪಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಜಿಎಂಪಿಎಲ್ ಹಾಗೂ ಎಂ.ಎಸ್.ಇ.ಝಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಐ.ಎ.ಡಿ.ಬಿ ಅಧಿಕಾರಿಗಳು, ನಿರ್ವಸಿತರ ಪ್ರತಿನಿಧಿಗಳು ಉಪಸ್ಥಿತರಿದ್ದರು.