ಉಡುಪಿ, ನ 08 (DaijiworldNews/MS): ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆಎಸ್), ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಮುಂಭಾಗ ಮಂಗಳವಾರ ರೈತ-ಕಾರ್ಮಿಕ-ಕೂಲಿಗಾರರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈಲ್ವೆ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ರೈಲ್ವೆ ನಿಲ್ದಾಣಗಳು, ನಿಲ್ದಾಣಗಳ ಸುತ್ತ ಇರುವ ರೈಲ್ವೆ ಭೂಮಿ, ರೈಲ್ವೆ ಹಳಿಗಳು, ರೈಲುಗಳು ಸರಕು ದಾಸ್ತಾನು ಮುಂತಾದವರು ನಮ್ಮಆಸ್ತಿ. ಈಗಾಗಲೇ ಭಾರತದಲ್ಲಿ 7300 ಕ್ಕೂ ಹೆಚ್ಚು ರೈಲು ನಿಲ್ದಾಣಗಳು, 13400 ಪ್ರಯಾಣಿಕರ ರೈಲುಗಳು ಹಾಗೂ ಪ್ರತಿದಿನ 2.40 ಕೋಟಿ ಪ್ರಯಾಣಿಕರು ಸಂಚರಿಸುತ್ತಾರೆ. 9141 ಗೂಡ್ಸ್ ರೈಲುಗಳು ಪ್ರತಿ ದಿನ ಸಂಚರಿಸುತ್ತಿವೆ. ಆಹಾರ ಧಾನ್ಯಗಳು, ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳು, ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು ಸೇರಿದಂತೆ ಪ್ರತಿ ದಿನ ಸಾಗಣೆ ಮಾಡಲಾಗುತ್ತಿದೆ. 1991ರಿಂದ ಜಾರಿಗೆ ಬಂದ ಉದಾರೀಕರಣ ನೀತಿಯನ್ನು ಮೋದಿ ಸರ್ಕಾರವು ಅನುಸರಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ಮೀಟರ್ ಅಳವಡಿಕೆ ಕಾರ್ಯವನ್ನು 2025ರ ಮಾರ್ಚ್ ಒಳಗೆ ಪೂರ್ಣ ಗೊಳಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಇದರಿಂದ ಮುಂದೆ ಎಲ್ಲರಿಗೂ ಗಂಡಾಂತರ ಕಾದಿದೆ. ಆದುದರಿಂದ ಮುಂದಿನ ಚುನಾವಣೆ ಯಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ ಕಾರ್ಯ ಮಾಡಬೇಕು ಖಾಸಗೀಕರಣದಿಂದ ರೈಲ್ವೆಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಸಿಬ್ಬಂದಿಗಳಿಗೆ ಸಮಸ್ಯೆಯಾಗುತ್ತದೆ. ದೇಶಕ್ಕೂ ಸಹ ವಿನಾಶಕಾರಿಯಾಗಲಿದೆ. ಆದ್ದರಿಂದ ಖಾಸಗೀಕರಣ ಕೈಬಿಡುವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ ಮಾತನಾಡಿದರು. ಧರಣಿ ಯಲ್ಲಿ ಸಿಐಟಿಯು ಮುಖಂಡರಾದ ಮೋಹನ್, ರಾಮ ಸಾಲಿಯಾನ್, ಸುಭಾಷ್ಚಂದ್ರ ನಾಯ್ಕ್, ರಾಮ ಕರ್ಕಡ, ನಳಿನಿ, ದಯಾನಂದ ಕೋಟ್ಯಾನ್, ರಮೇಶ್, ಪ್ರತಿಮಾ, ಸದಾಶಿವ ಪೂಜಾರಿ, ದಯಾನಂದ ಅಮೀನ್ ಇನ್ನಿತರರು ಉಪಸ್ಥಿತರಿದ್ದರು