ಬ್ರಹ್ಮಾವರ, ನ 08 (DaijiworldNews/MS): ಅಂಬೇಡ್ಕರ್ ಭವನದಲ್ಲಿ ಮದ್ಯಪಾನ ಪಾರ್ಟಿ ಮಾಡಿದ ಘಟನೆ ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿನಲ್ಲಿ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಶ್ಯಾಮರಾಜ್ ಬಿರ್ತಿ, ಸುರೇಶ್, ಶಿವ, ಪ್ರಶಾಂತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿಯ ದಸಂಸ ಮುಖಂಡ ಶ್ಯಾಮರಾಜ್ ಬಿರ್ತಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಆಯ್ಕೆಯಾದ ತನ್ನ ಮಗನ ಅಭಿನಂದನ ಸಮಾರಂಭ ಮುಗಿದ ಬಳಿಕ ಇದೇ ನೆಪದಲ್ಲಿ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಸವಿತಾ ವಾರಂಬಳ್ಳಿ ಎಂಬವರು ಪೊಲೀಸರಿಗೆ ದೂರು ದಾಖಲಿಸಿದ್ದು, ಶ್ಯಾಮರಾಜ್ ಬಿರ್ತಿ ಹಾಗೂ ತನ್ನ ಸ್ನೇಹಿತರೊಂದಿಗೆ ಸೇರಿ ಪಂಚಾಯತ್ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ, ಅಂಬೇಡ್ಕರ್ ಭವನಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಹಾಗೂ ಅಂಬೇಡ್ಕರ್ ಭವನವನ್ನು ದುರುಪಯೋಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ದೂರುದಾರರಾದ ಸವಿತಾ ಘಟನೆಯ ವೀಡಿಯೋ ಮಾಡಲು ಹೋದಾಗ ಆರೋಪಿಗಳು ಬೆದರಿಕೆ ಹಾಕಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.