ಉಳ್ಳಾಲ, ನ 08 (DaijiworldNews/MS): ನರಿಂಗಾನ ಗ್ರಾಮದ ಕೊಲ್ಲರಕೋಡಿಯಲ್ಲಿ ವಾರದ ಹಿಂದೆ ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾದ ಚಿರತೆಯೊಂದು ಜನರು ಹಾಗೂ ಅರಣ್ಯಾಧಿಕಾರಿಗಳಿಗೆ ಅದು ಚಿರತೆಯೋ ಬೆಕ್ಕೋ ಎಂಬ ಸಂಶಯ ಇನ್ನೂ ನಿವಾರಣೆ ಆಗದಿರುವ ಸಮಯದಲ್ಲೇ ಕೊಲ್ಲರಕೋಡಿಯಿಂದ ಎರಡು ಕಿ. ಮೀ. ದೂರದ ತೌಡುಗೋಳಿ-ಬೋಳ ಒಳ ರಸ್ತೆಯಲ್ಲಿ ಸೋಮವಾರ ರಾತ್ರಿ ಚಿರತೆಯೊಂದು ರಸ್ತೆ ದಾಟಿ ಪೊದೆ ಸೇರುತ್ತಿರುವುದನ್ನು ಪಿಕ್ ಅಪ್ ಚಾಲಕರೊಬ್ಬರು ಕಂಡಿದ್ದಾರೆ ಎನ್ನಲಾಗಿದ್ದು ಇದೀಗ ಈ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ.
ವಾರದ ಹಿಂದೆ ಗ್ರಾಮದ ಕೊಲ್ಲರಕೋಡಿಯ ನಿರ್ಮಾಣ ಹಂತದ ಮನೆಯ ಕಬ್ಬಿಣ ಕದ್ದ ಕುರಿತಾಗಿ ಕಳ್ಳರ ಪತ್ತೆಗೆ ಸಮೀಪದ ಯೆನೆಪೋಯ ಆಯುರ್ವೇದ ಆಸ್ಪತ್ರೆಯ ಮುಖ್ಯ ದ್ವಾರ ಚೌಕಿ ಬಳಿ ಇರುವ ಅಂಗಡಿಯೊಂದರ ಸಿಸಿಟಿವಿ ಪರೀಕ್ಷಿಸಿದಾಗ ಮಧ್ಯೆರಾತ್ರಿ 12.00ಗಂಟೆ ಹೊತ್ತಿಗೆ ಸಣ್ಣ ಗಾತ್ರದ ಚಿರತೆ ರಸ್ತೆ ದಾಟುತ್ತಿರುವ ದೃಶ್ಯ ಸಿಸಿಟಿವಿ ಫೂಟೇಜ್ ನಲ್ಲಿ ಲಭ್ಯವಾಗಿದ್ದರೂ ಅರಣ್ಯಾಧಿಕಾರಿಗಳು ಮಾತ್ರ ಅದು ಬೆಕ್ಕು ಇರಬಹುದು, ಸಿಸಿಟಿವಿ ಫೂಟೇಜ್ ಝೂಮ್ ಮಾಡಿದಾಗ ಚಿರತೆ ತರಹ ಕಾಣುತ್ತಿದೆ, ಕೇವಲ ಒಂದು ಶೇ. ಮಾತ್ರ ಅದು ಚಿರತೆ ಮರಿ ಆಗಿರುವ ಸಾಧ್ಯತೆ ಇದೆ ಎಂದು ಗೊಂದಲದ ಉತ್ತರ ನೀಡಿದ್ದರು. ಅದೇ ದಿನಗಳಲ್ಲಿ ಬೆಕ್ಕೊಂದು ರಸ್ತೆ ದಾಟುತ್ತಿದ್ದ ವಿಡಿಯೋ ವೈರಲ್ ಆಗಿದ್ದರಿಂದ ಅದು ಬೆಕ್ಕು ಇರಬಹುದು ಎಂಬ ಸಂಶಯ ವ್ಯಕ್ತವಾದ್ದರಿಂದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಲಿಲ್ಲ. ಇದೀಗ ಅಂದು ಸಂಚರಿಸಿದ ರಸ್ತೆಯಿಂದಲೇ ಬೋಳದ ಪದವಿಗೆ ಕೇವಲ ಎರಡು ಕಿ. ಮೀ. ದೂರದಲ್ಲಿ ಸಣ್ಣ ಗಾತ್ರದ ಚಿರತೆ ರಸ್ತೆ ದಾಟುತ್ತಿರುವುದನ್ನು ತೌಡುಗೋಳಿ ಪಾರ್ಕ್ ನ ಪಿಕ್ ಅಪ್ ಚಾಲಕ ಬೋಳದಪದವಿನ ಶಫಿಕ್ ಮಹಮ್ಮದ್ ಕಂಡಿದ್ದು ಪಿಕ್ ಅಪ್ ಗ್ಲಾಸ್ ತೆರೆದಿದ್ದುದರಿಂದ ವಿಡಿಯೋ ಮಾಡುವುದು, ಫೊಟೋ ತೆಗೆಯಲಾಗಲಿ ಧೈರ್ಯ ಬರಲಿಲ್ಲ, ಸ್ವಲ್ಪ ಮುಂದಕ್ಕೆ ಹೋಗಿ ಗ್ಲಾಸ್ ಮುಚ್ಚಿ ವಾಪಾಸು ಬಂದು ಫೊಟೋ ತೆಗೆಯಲು ಮುಂದಾದಾಗ ಚಿರತೆ ಅಲ್ಲೇ ಪೊದೆಯೊಳಗೆ ಹೋಗಿದೆ ಎಂದು ಹೇಳಿದ್ದಾರೆ.
ತೌಡುಗೋಳಿ ಸಮೀಪದ ಬೋಳದ ಪದವು, ಬೆರ್ಮದೆ, ಗರೋಡಿ, ಬೋರ್ನೋಡಿ ಪರಿಸರದಲ್ಲಿ ಚಿರತೆ ಸಂಚಾರ ಇದೆ ಎಂಬುದು ಹಲವು ಮಂದಿ ಹೇಳುತ್ತಿದ್ದು ಇದೀಗ ಜಂಕ್ಷನ್ ಪಕ್ಕದಲ್ಲೇ ಸಂಚಾರ ಕಂಡಿರುವುದು ಭಯ ಮೂಡಿಸಿದೆ. ಈ ಪರಿಸರದ ಕ್ರಶರ್ ನಲ್ಲಿ ನೀರು ತುಂಬಿರುವುದರಿಂದ ಚಿರತೆ ನೀರು ಕುಡಿಯಲು ಬರುತ್ತಿರಬಹುದು ಎಂಬ ಸಂಶಯ ಇದೆ. ಒಂದು ನಾಯಿಯನ್ನು ಅಥವಾ ಇಲ್ಲಿ ಹೆಚ್ಚಾಗಿ ಕಂಡುಬರುವ ಮಧ್ಯಮ ಗಾತ್ರದ ಉಡ ಹೊಟ್ಟೆ ತುಂಬಿಸಿಕೊಂಡರೆ ಮತ್ತೆ ಒಂದು ವಾರ ಕಾಲ ಕಷ್ಟಪಟ್ಟು ಬೇಟೆಯಾಡಿ ತಿನ್ನಲು ಮನಸ್ಸು ಮಾಡದ ಚಿರತೆ ಒಂದು ವಾರ ಕಾಲ ಹೊಟ್ಟೆ ತುಂಬಿಸುವ ಸಲುವಾಗಿ ಮಾಂಸ ಬೇಟೆ ಚಿಂತನೆ ಮಾಡುವುದಿಲ್ಲ ಎನ್ನುತ್ತಾರೆ. ಗ್ರಾಮದಲ್ಲಿ ಸಾಕು ನಾಯಿ ಅಥವಾ ಬೀದಿ ನಾಯಿ ಚಿರತೆಗೆ ಆಹಾರವಾದ ಮಾತು ಕೇಳಿ ಬಂದಿಲ್ಲ.
ಯುವಕರ ತಂಡ ಸಾಮಾಜಿಕ ಜಾಲತಾಣದಲ್ಲಿ ಸುರಕ್ಷತೆ ಬಗ್ಗೆ ಎಚ್ಚರಿಸುವ ಜವಬ್ದಾರಿ ನಿರ್ವಹಿಸಿದ್ದಾರೆ. ರಾತ್ರಿ ಅಂಗಡಿ ಮಾಲೀಕ ಯುವಕನೊಬ್ಬ ಮನೆಗೆ ತೆರಳುತ್ತಿದ್ದಾಗ ನಾಯಿಗಳ ಜೊತೆ ಚಿರತೆ ಕಾದಾಡುವುದನ್ನು ಕಂಡಿದ್ದು ಚಿರತೆ ಹೆಜ್ಜೆ ಗುರುತಿನಂತೆ ಕೆಲವೊಂದು ಹೆಜ್ಜೆ ಗುರುತು ಕಂಡಿದೆ.