ಮಂಗಳೂರು, ನ 07 (DaijiworldNews/AA) : ಕಾರ್ಕಳದ ಬೈಲೂರಿನಲ್ಲಿ ಗೋಮಾಳಕ್ಕೆಂದು ಕಾಯ್ದಿರಿಸಿದ ಸ್ಥಳದಲ್ಲಿ ಅನಧಿಕೃತವಾಗಿ ಪರಶುರಾಮ ಥೀಮ್ ಪಾರ್ಕ್ ಹಾಗೂ ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ಅವರನ್ನು ಬಿಜೆಪಿ ಪಕ್ಷದಿಂದ ಶಾಸಕ ಸ್ಥಾನದಿಂದ ತಕ್ಷಣ ಅಮಾನತುಗೊಳಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮನ ಕುರಿತಾದ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ಸಹ ಅಮಾನತು ಮಾಡಬೇಕು. ಚಿರಂಜೀವಿ ಪರಶುರಾಮನ ಅಸಲಿ ವಿಗ್ರಹವನ್ನು ನಿರ್ಮಿಸಬೇಕು. ಅದು ಥೀಮ್ ಪಾರ್ಕ್ ನಲ್ಲೇ ಅಗಬಹುದು ಅಥವಾ ಅವಿಭಜಿತ ಜಿಲ್ಲೆಯ ಎಲ್ಲಿಯಾದರೂ ಪರಶುರಾಮನ ಮೂರ್ತಿ ನಿರ್ಮಾಣವಾಗಲಿ. ಪರಶುರಾಮನ ವಿಗ್ರಹದ ವಿಚಾರದಲ್ಲಿ ಆಗಿರುವಂತಹ ಅನ್ಯಾಯ, ಅವ್ಯವಹಾರದ ವಿರುದ್ಧ ಮಾತನಾಡದೇ ಇದ್ದಲ್ಲಿ ಪರಶುರಾಮನ ಶಾಪ ತಟ್ಟಬಹುದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಶುರಾಮನ ವಿಗ್ರಹ ನಿರ್ಮಾಣ ವಿಷಯದಲ್ಲಾಗಿರುವ ಅನ್ಯಾಯ, ಅವ್ಯವಹಾರದ ವಿರುದ್ಧ ಧರ್ಮವನ್ನು ರಕ್ಷಣೆ ಮಾಡಲು, ಅಧರ್ಮದ ವಿರುದ್ಧ ಹೋರಾಡಲು ಒಬ್ಬ ನಿಜವಾದ ತಾನು ಸಿದ್ಧನಿದ್ದೇನೆ.
ಇದಕ್ಕಾಗಿ ಎಲ್ಲ ಸ್ವಾಮೀಜಿಗಳನ್ನು, ಮಠಾಧೀಶರನ್ನು ಭೇಟಿಯಾಗಿ ಅವರ ಆರ್ಶಿವಾದ ಹಾಗೂ ಬೆಂಬಲ ಪಡೆಯುವ ಅಭಿಯಾನವನ್ನು ಇದೇ ಶುಕ್ರವಾರ ಪ್ರಾರಂಭ ಮಾಡುತ್ತೇನೆ" ಎಂದು ಮಿಥುನ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಪುರಸಭಾ ಸದಸ್ಯ ಶುಭೋದ್ ರಾವ್, ಕಾಂಗ್ರೆಸ್ ಪ್ರಮುಖರಾದ ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮೋಹನ್ ಕೋಟಿಯನ್, ವಿಶ್ವಾಸ್ ದಾಸ್, ವಿಕಾಸ್ ಶೆಟ್ಟಿ, ದುರ್ಗಾ ಪ್ರಸಾದ್, ಶಾಂತಲಾ ಗಟ್ಟಿ ಮತ್ತಿತರರು ಭಾಗವಹಿಸಿದ್ದರು.