ಕುಂದಾಪುರ, ನ 06 (DaijiworldNews/MS): ಕೊಂಕಣ ರೈಲ್ವೇ ವ್ಯಾಪ್ತಿಗೆ ಬರುವ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಳೆದ ಹಲವು ದಶಕಗಳಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಲೋಕಲ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದ್ದವು. ಆದರೆ ಸೇನಾಪುರ ಸುತ್ತಮುತ್ತಲಿನ ಪ್ರದೇಶದ ಬಹುತೇಕ ಜನರು ದೂರದ ಬೆಂಗಲೂರು ಮತ್ತು ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದು, ರೈಲು ಪ್ರಯಾಣಕ್ಕಾಗಿ ಬೈಂದೂರು ಅಥವಾ ಕುಂದಾಪುರ ರೈಲು ನಿಲ್ದಾಣಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಇದರಿಂದಾಗಿ ಪ್ರಯಾಣದ ಸಮಯ ಮತ್ತು ವೆಚ್ಚ ಹೆಚ್ಚಾಗುತ್ತಿದ್ದವು. ಇದರಿಂದ ಆಕ್ರೋಶಿತಗೊಂಡ ಸೇನಾಪುರ ರೈಲು ನಿಲ್ದಾಣದ ಫಲಾನುಭವಿ ಗ್ರಾಮಸ್ಥರು ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಸೇನಾಪುರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಕಾಲಿಕ ಮಳೆಯಬ್ಬರವನ್ನೂ ಲೆಕ್ಕಿಸದ ಜನ ತಮ್ಮ ಹಕ್ಕೊತ್ತಾಯವನ್ನು ಪ್ರತಿಭಟನೆಯ ಮೂಲಕ ಮಂಡಿಸಿದರು.
ಈ ಸಂದರ್ಭ ಭೇಟಿ ನೀಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಸಂಸದ ಬಿ.ವೈ ರಾಘವೇಂದ್ರ ಜೊತೆಗೆ ಚರ್ಚಿಸಿದ್ದೇನೆ. ಒಂದು ತಿಂಗಳೊಳಗೆ ಸೇನಾಪುರದಲ್ಲಿ ಬೆಂಗಲೂರು ಮತ್ತು ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು.
ಕುಂದಾಫುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ್ ಶೆಟ್ಟಿ ಮಾತನಾಡಿ, ಹಲವು ದಶಕಗಳಿಂದ ನಮ್ಮ ಊರಿನ ಜನರ ಸಮಸ್ಯೆಗಳನ್ನು ಶಾಂತವಾಗಿಯೇ ಹೇಳುತ್ತಾ ಬಂದಿದ್ದೇವೆ. ಆದರೆ ಇದರಿಮದ ಪ್ರಯೋಜನವಾಗಿರಲಿಲ್ಲ. ಅದಕ್ಕಾಗಿ ಇಡೀ ಊರಿನ ಗ್ರಾಮಸ್ಥರು ಇಂದು ಒಟ್ಟಾಗಿ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪ್ರತಿಭಟನೆಗೆ ಜಯ ಸಿಗುತ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು.
ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆಯೊಂದೇ ದಾರಿಯಾಗಿದೆ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಭಾಗವಹಿಸಿದ್ದಾರೆ. ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಯ ಜೊತೆಗೆ ಗೂಡ್ಸ್ ರೈಲು ನಿಲುಗಡೆಯಾದರೆ ನಮ್ಮ ಊರು ಇನ್ನಷ್ಟು ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ತೀವ್ರವಾಗಲಿದೆ ಎಂದು ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಹೇಳಿದರು.