ಬೆಳ್ತಂಗಡಿ, ನ 4 (DajiiworldNews/SK): ವಿವಾಹಿತ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ. ಪೊಲೀಸರು ಮೃತ ಶಶಿಕಲಾ ಪತಿ ಸುಧಾಕರ್ ನಾಯ್ಕ ಅವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನ.3 ರಂದು ಬೆಳ್ತಂಗಡಿಯ ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ಶಶಿಕಲಾ ಮೃತ ದೇಹ ಪತ್ತೆಯಾಗಿತ್ತು. ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿತ್ತು.
ಆದರೆ ಈಗ ಪೊಲೀಸರಿಗೆ ಬಾವಿಗೆ ಹೋಗುವ ದಾರಿಯಲ್ಲಿ ಯಾರನ್ನೋ ಎಳೆದೊಯ್ದ ಕುರುಹುಗಳು ಕಂಡು ಬಂದಿದೆ ಎನ್ನಲಾಗಿದೆ. ಹೊರನೋಟಕ್ಕೆ ಇದೊಂದು ಕೊಲೆ ಪ್ರಕರಣವೆಂಬ ಅನುಮಾನ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಪತಿ ಸುಧಾಕರ್ ನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿಗಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಮೃತ ಶಶಿಕಲಾ ಹಾಗೂ ಪತಿ ಸುಧಾಕರ್ ನಾಯ್ಕ್ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಸುಧಾಕರ್ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದು, ಇವರಿಬ್ಬರು ಇಲ್ಲಿನ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.
ಇವರಿಗೆ 7ವರ್ಷದ ಮಗಳಿದ್ದು, ಘಟನೆಯ ದಿನ ಮಗಳು ಅಜ್ಜಿ ಮನೆಗೆ ತೆರಳಿದ್ದಳು. ಗುರುವಾರ ರಾತ್ರಿ ಪತಿ, ಪತ್ನಿ ಮಾತ್ರ ಮನೆಯಲ್ಲಿದ್ದರು. ಶುಕ್ರವಾರ ಬೆಳಗ್ಗೆ ಪತಿ ಸುಧಾಕರ್ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿ ಬೇಗ ಮನೆಗೆ ಹಿಂತಿರುಗಿದ್ದು, ಈ ವೇಳೆ ಶಶಿಕಲಾ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದೀಗ ಸ್ಥಳಕ್ಕೆ ಪೊಲೀಸರು, ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸುಧಾಕರ್ ಹಾಗೂ ಶಶಿಕಲಾ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಶುಕ್ರವಾರ ಘಟನೆಗೂ ಮುನ್ನ ಪತಿ ಪತ್ನಿ ಮಧ್ಯೆ ಮಾತಿನ ಚಕಮುಕಿ ನಡೆದಿರುವ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಸುಧಾಕರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.