ಉಡುಪಿ, ನ 04 (DaijiworldNews/MS): ಕಾಲೇಜು ಆಡಳಿತ ಮಂಡಳಿಯ ಒಳಜಗಳದಿಂದಾಗಿ ನೂರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅತಂತ್ರವಾಗಿರುವ ಪ್ರಕರಣ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ವರದಿಯಾಗಿದೆ. ಕೇರಳ ಮೂಲದ ಇಸಿಆರ್ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಸಮೀಪದ ಮಧುವನದಲ್ಲಿ 18 ಎಕರೆ ವಿಸ್ತಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಕೇರಳ ಮೂಲದ ದಂಪತಿಗಳ ಕೌಟುಂಬಿಕ ಸಮಸ್ಯೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಿದೆ. ಮಹಿಮಾ- ಮಧು ದಂಪತಿಗಳು ಈ ಶಿಕ್ಷಣ ಸಂಸ್ಥೆಯನ್ನು ನಡೆಸುತಿದ್ದು, ಇದೀಗ ದಂಪತಿಗಳ ವೈವಾಹಿಕ ಜೀವನದ ಸಮಸ್ಯೆಯಿಂದಾಗಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಕಚ್ಚಾಟ ಆರಂಭವಾಗಿದೆ. ಇವರಿಬ್ಬರು ಎರಡು ದಶಕದ ದಾಂಪತ್ಯ ಜೀವನದ ಜೊತೆಗೆ, ಒಂದೂವರೆ ದಶಕದಿಂದ ಜಂಟಿಯಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕೇರಳದಲ್ಲಿ ನೋಂದಣಿ ಮಾಡಿಕೊಂಡಿರುವ ಈ ಸಂಸ್ಥೆ ಸದ್ಯ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಸಮೀಪದ ಮಧುವನದಲ್ಲಿ 18 ಎಕರೆ ವಿಸ್ತಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಇವರ ದಾಂಪತ್ಯದಲ್ಲಿ ಬಿರುಕು ಕಂಡು ಬಂದಿದೆ.
ಶುಕ್ರವಾರ ನ. 03 ರಂದು ಮಹಿಮಾ ನೂರಾರು ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕಾಲೇಜಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಮಹಾ ಹೈಡ್ರಾಮವೇ ನಡೆದು ಸ್ಥಳಕ್ಕೆ ಪೋಲಿಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಮಾ, “ನನ್ನ ಪತಿಗೆ ಅಕ್ರಮ ಸಂಬಂಧವೇ ಇದಕ್ಕೆ ಕಾರಣ. ಮಧು ಅವರು ಈ ಟ್ರಸ್ಟ್ ನ ಅಧ್ಯಕ್ಷ ರಾಗಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪ್ರಸ್ತುತ ನಾನೇ ಅಧ್ಯಕ್ಷೆಆದರೆ ನನಗೆ ಇಲ್ಲಿಗೆ ಬರಲು ಅವಕಾಶವನ್ನೇ ನೀಡುತಿಲ್ಲ ಪೊಲೀಸ್ ಇಲಾಖೆ ಯಿಂದದ ಕೂಡಾ ನನಗೆ ತೊಂದರೆ ನೀಡಿದ್ದಾರೆ. ಆದರೆ ಈಗ ಮಕ್ಕಳ ವಿನಂತಿಯ ಮೇಲೆ ನಾನು ಇಲ್ಲಿಗೆ ಬಂದಿದ್ದೇನೆ, ಜೀವ ಹೋದರೂ ನಾನು ಇಲ್ಲಿಂದ ಹೋಗುವುದಿಲ್ಲ. ಕಾನೂನಿನ ಪ್ರಕಾರ ನಾನೇ ಅಧ್ಯಕ್ಷೆ” ಎಂದು ಮಹಿಮಾ ಆರೋಪಿಸಿದ್ದಾರೆ.