ಮಂಗಳೂರು, ನ 04 (DaijiworldNews/MS): ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷಗಳ ಕಠಿನ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಬಾಗಲಕೋಟೆ ಹಾರ್ದೊಳ್ಳಿಯ ಶ್ರೀಕಾಂತ್ ಹನುಮಂತ ಶಿಕ್ಷೆಗೊಳಗಾದಾತ. ಸಂತ್ರಸ್ತ ಬಾಲಕಿಯೂ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಬಾರು ಗ್ರಾಮದ ಬಾಕ್ಸ್ ಕಂಪೆನಿಯೊಂದರ ಶೆಡ್ನಲ್ಲಿ ತನ್ನ ಪಾಲಕರ ಜತೆ ವಾಸವಾಗಿದ್ದಳು. ಅದೇ ಶಡ್ ಪಕ್ಕ ಆರೋಪಿ ವಾಸವಾಗಿದ್ದ. ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ್ದ ಈತ 2019ರ ಎ. 12ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದ. ಇದಾದ ನಂತರ ಮೊಬೈಲ್ನಲ್ಲಿ ಫೋಟೋಗಳನ್ನು ತೆಗೆದು ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬೆದರಿದ ಬಾಲಕಿ ಒಮ್ಮೆ ಶಾಲೆಯಲ್ಲಿ ಅಸ್ವಸ್ಥಳಾಗಿದ್ದು ಈ ಸಂದರ್ಭ ಪರೀಕ್ಷಿಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಎಸಿಪಿ ಶ್ರೀನಿವಾಸ ಗೌಡ ಆರ್. ಪ್ರಾಥಮಿಕ ತನಿಖೆ ನಡೆಸಿದ್ದರು. ಎಸಿಪಿ ಬೆಳ್ಳಿಯಪ್ಪ ಕೆ.ಯು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಆರೋಪಿಗೆ 20 ವರ್ಷಗಳ ಕಠಿನ ಸಜೆ ವಿಧಿಸಿ ಹಾಗೂ ನೊಂದ ಬಾಲಕಿಗೆ 10.50 ಲ.ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶಿಸಿ ತೀರ್ಪು ನೀಡಿದ್ದಾರೆ.