ಸುಳ್ಯ, ನ 03 (DaijiworldNews/MS): ಡೈರಿ ರಿಚ್ನ ಐಸ್ ಕ್ರೀಂ ಮಾಲಿಕನ ಪತ್ನಿ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕ್ಕಿದ್ದು, ಗೋವಿಂದರಾಜನಗರ ಪೊಲೀಸರು ಐಶ್ವರ್ಯಾ ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೃತ ಐಶ್ವರ್ಯ 5 ವರ್ಷಗಳ ಹಿಂದೆ ಕುಟುಂಬ ನಿಶ್ಚಯಿಸಿದಂತೆ , ಡೈರಿ ರಿಚ್ನ ಐಸ್ ಕ್ರೀಂ ಮಾಲಿಕರಾದ ಗಿರಿಯಪ್ಪ ಅವರ ಪುತ್ರ ರಾಜೇಶ್ ಅವರನ್ನು ವಿವಾಹವಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದ ಪ್ರತಿಭಾವಂತೆಯಾಗಿದ್ದರು.
ಡೈರಿ ರಿಚ್ ಐಸ್ ಕ್ರೀಮ್ ಸಂಸ್ಥೆಯಲ್ಲಿ, ಐಶ್ವರ್ಯ ತಂದೆ ಸುಬ್ರಮಣಿ ಅವರ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಈತ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡತೊಡಗಿದ್ದ ಎಂದು ಆರೋಪಿಸಲಾಗಿದೆ.
ಆಸ್ತಿಕಾಗಿ ದ್ವೇಷ ಕಟ್ಟಿಕೊಂಡಿದ್ದ ರವೀಂದ್ರ ಕುಟುಂಬ, ಐಶ್ವರ್ಯ ಚಾರಿತ್ರ್ಯ ವಧೆ ಮಾಡಿ ಆಕೆಯ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳಿ ಆಕೆಯನ್ನು ಕೆಟ್ಟದಾಗಿ ಬಿಂಬಿಸಿದ್ದರಂತೆ. ಹೀಗಾಗಿ ಆಕೆಯನ್ನು ನಿಂದಿಸಿ, ಕಿರುಕುಳ ನೀಡುತ್ತಿದ್ದ ಪತಿ ಹಾಗೂ ಅವರ ಕುಟುಂಬ ವರದಕ್ಷಿಣೆಗಾಗಿ ಪೀಡಿಸುತ್ತಿತ್ತು ಎಂದು ಆರೋಪಿಸಲಾಗಿದೆ.
ಇದರಿಂದಾಗಿ ನೊಂದು ಕಳೆದ 20 ದಿನಗಳ ಹಿಂದೆ ಐಶ್ವರ್ಯ ಗಂಡನ ಮನೆಬಿಟ್ಟು ಬಂದಿದ್ದಳು. ಕಳೆದ 26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಸಂಸಾರದಲ್ಲಿ ಬಿರುಕಿಗೆ ಪ್ರಚೋದನೆ ನೀಡಿದ್ದ ಸಂಬಂಧಿಕರಾದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ 5 ಮಂದಿ ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.