ಉಡುಪಿ, ನ 03 (DaijiworldNews/MS): ಪಾದೂರಿನ ಐ.ಎಸ್.ಪಿ.ಆರ್.ಎಲ್ 2ನೇ ಹಂತದ ಕ್ರೂಡ್ ಆಯಿಲ್ ಶೇಖರಣ ಘಟಕ, ಕೇಂದ್ರ ಸರಕಾರ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಆದರೆ ಯೋಜನೆಯಿಂದ ಕಳೆದುಕೊಳ್ಳುವಂತಹ ಸಂತ್ರಸ್ಥರಿಗೆ ಅವರಿಗೆ ಅನುಕೂಲವಾದ ಸ್ಥಳವನ್ನು ನೀಡುವ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಸಂತ್ರಸ್ಥರ ಹೆಸರಲ್ಲಿ ಕೆಲವರು ಭೂ ವ್ಯಾಪಾರದ ದೃಷ್ಟಿಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ಥರಿಗೆ ಅನುಕೂಲವಾದ ಸ್ಥಳವನ್ನು ತೋರಿಸದೆ ಜಿಲ್ಲಾಡಳಿತವನ್ನು ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದ್ದು, ಇದೊಂದು ಗಂಭೀರ ವಿಷಯವಾಗಿ ಪರಿಗಣಿಸಬೇಕಾಗಿದೆ. ನಿಜವಾದ ಸಂತ್ರಸ್ತರನ್ನು ಹೊರಗಡೆ ಇಟ್ಟು ಅವರ ಅಭಿಪ್ರಾಯ ಕೇಳದೆ ಯಾರೋ ಸಂತ್ರಸ್ಥರೆಂದು ಬಿಂಬಿಸಿ ಅಕ್ರಮ ಮಾಡುವುದು ಎಷ್ಟು ಸೂಕ್ತ?. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಸೂಕ್ತವಾದ ಸ್ಥಳವಿದ್ದು ಅಲ್ಲಿಯೇ ಸಂತ್ರಸ್ಥರಿಗೆ ಸೂಕ್ತವಾದ ನಿವೇಶನವನ್ನು ಗುರುತಿಸಿ ಸಂತ್ರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನರ್ ವಸತಿಯನ್ನು ಕಲ್ಪಿಸುವುದು ಸೂಕ್ತವಾಗಿದೆ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳ ಬೇಕೆಂದು ತಿಳಿಸಿದ್ದಾರೆ.
ಇನ್ನೊಂದು ಮಹತ್ವದ ಯೋಜನೆಯಾದ ಸುಜ್ಲಾನ್ ಕಂಪೆನಿಯು ನಂದಿಕೂರಿನಲ್ಲಿ ಎಸ್.ಇ.ಝಡ್ ಮುಖಾಂತರ ಸಾವಿರಾರು ಎಕ್ರೆ ಭೂಮಿಯನ್ನು ಪಡೆದಿದ್ದು, ಕಂಪೆನಿಯು ಈಗ ದುಸ್ಥಿತಿಯಲ್ಲಿದ್ದು, ರಿಯಲ್ ಎಸ್ಟೇಟ್ನವರೊಂದಿಗೆ ಸೇರಿ ಜಾಗ ಮಾರಾಟ ಮಾಡುವುದು ದುರದೃಷ್ಟಕರ. ಗ್ರಾಮದ ಆಸು ಪಾಸಿನಲ್ಲಿ ವಸತಿ, ಮನೆ ಸ್ಥಳವಿಲ್ಲದೆ ಸಾವಿರಾರು ಕುಟುಂಬ ಇದ್ದು, ಅವರ ಬಗ್ಗೆ ಯೋಚನೆ ಮಾಡದೆ ಸುಜ್ಲಾನ್ ಕಂಪೆನಿಯು ಜಾಗವನ್ನು ವಶೀಕರಣ ಮಾಡಿ ಜಾಗ ಮಾರಾಟದ ಕೇಂದ್ರವಾದದ್ದು ದುರದೃಷ್ಟಕರ ಎಂದು ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.