ಕುಂದಾಪುರ, ನ 02 (DaijiworldNews/HR): ಬರೋಬ್ಬರಿ 23 ಲಕ್ಷ ರೂಪಾಯಿ ಸಾಲಕ್ಕೆ ಅಡವಿಟ್ಟ ಭೂಮಿಯನ್ನು ಸಾಲ ತೀರಿಸದೇ ನಕಲಿ ಸಹಿ ಹಾಗೂ ಸೀಲುಗಳನ್ನು ಬಳಸಿ ಬೇರೆಯವರಿಗೆ ಮಾರಾಟ ಮಾಡಿದ ಖತರ್ನಾಕ್ ಪ್ರಕರಣವೊಂದು ಕುಂದಾಪುರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಸೊಸೈಟಿಯವರು ದೂರು ದಾಖಲಿಸಿದ್ದಾರೆ.
6 ಮಾರ್ಚ್ 2020ರಂದು ಕುಂದಾಪುರ ತಾಲೂಕು ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ.ಲಿ ಸಂಸ್ಥೆಯ ಪಡುಕೋಣೆ ಶಾಖೆಯಲ್ಲಿ ಶ್ರೀ ರಾಮ ಎಂಬುವರು ತಮ್ಮ ಹೆಸರಿನ ಜಾಗವನ್ನು ಅಡಮಾನವಾಗಿಸಿ 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಸಂಜೀವ, ಗುರುಪ್ರಸಾದ್, ಕಿರಣ್ ಹಾಗೂ ರಾಘವೇಂದ್ರ ಎಂಬುವರು ಜಾಮೀನು ನೀಡಿದ್ದರು. ಬಳಿಕ ಅದೇ ಅಡಮಾನದ ಆಧಾರದ ಮೇಲೆ ಹಾಗೂ ಜಾಮೀನಿನ ಮೇಲೆ ಅದೇ ಸೊಸೈಟಿಯಿಂದ 11.60 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆನ್ನಲಾಗಿದೆ.
ಸಾಲ ಪಡೆದ ಶ್ರೀರಾಮ ಎಂಬಾತ ಉಳಿದ ಆರೋಪಿಗಳಾದ ರಾಮಕೃಷ್ಣ, ರತ್ನಾಕರ, ಜಗನ್ನಾಥ, ಹಾಗೂ ಗಿರೀಶ ಎಂಬುವರ ಜೊತೆ ಸೇರಿ ಸಾಲ ಪಡೆದುಕೊಂಡಿರುವ ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಕಲಿ ಸೀಲ್ ತಯಾರಿಸಿ ಸಾಲ ಸಂಪೂರ್ಣ ಪಾವತಿಯಾಗಿದೆ ಎಂದು ತೋರಿಸುವ, 6 ಫೆಬ್ರವರಿ 2020ರ ನಕಲಿ ಚುಕ್ತಾ ರಶೀದಿಯನ್ನು ತಯಾರಿಸಿ ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಿ ಜಾಗವನ್ನು ನಾಗರಾಜ ರವರಿಗೆ ಕ್ರಯಪತ್ರ ಮಾಡಿ, ಕ್ರಯಪತ್ರವನ್ನು ಕುಂದಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿದ್ದಲ್ಲದೇ ಕ್ರಯಪತ್ರದ ಆಧಾರದ ಮೇಲೆ ಕುಂದಾಪುರ ಸ್ಟೇಟ್ ಬ್ಯಾಂಕಿನಲ್ಲಿ ಸಾಲ ಮಾಡಿ ಕ್ರಯಪತ್ರವನ್ನು ಅಡವಿಟ್ಟು ಮೋಸ ಮಾಡಿದ್ದಾರೆ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕಿ ಮೇಬಲ್ ಡಿ ಅಲ್ಮೈಡಾ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಕಲಂ: 406, 465, 468, 471, 420, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.