ಕಾರ್ಕಳ, ನ 01 (DaijiworldNews/MS): ಬಜಗೋಳಿ- ಹೊಸ್ಮಾರು ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ನಲ್ಲೂರು ಕ್ರಾಸ್ - ಪಾಜಿಗುಡ್ಡೆಯ ವರೆಗೆ ಭಾರೀ ಗಾತ್ರದ ಮರಣಗುಂಡಿಗಳು ತೆರೆದುಕೊಂಡಿವೆ.
ಉಡುಪಿ, ಶೃಂಗೇರಿ,ಹೊರನಾಡಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಶ್ರೀ ಕ್ಷೇತ್ರಗಳಿಗೆ ಅಗಮಿಸುವ ಹಾಗೂ ತೆರಳುವ ಭಕ್ತಾದಿಗಳು ಬಜಗೋಳಿ- ಹೊಸ್ಮಾರು ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಮೂಲಕ ಪ್ರಯಾಣಿಸುತ್ತಾರೆ.
ಆಹೋರಾತ್ರಿ ಎನ್ನದೇ ಘನ, ಲಘವಾಹನಗಳು ಹಾಗೂ ದ್ವಿಚಕ್ರ ವಾಹನಗಳು ಇದೇ ಮಾರ್ಗದ ಮೂಲಕ ಹಾದೂ ಹೋಗುತ್ತಿದೆ.ತಿರುವು ಮುರುವು ಹಾಗೂ ಏರುಪೇರುಗಳಿಂದ ಕೂಡಿರುವ ಇಲ್ಲಿನ ರಾಜ್ಯ ಹೆದ್ದಾರಿಯೂ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ.
ರಸ್ತೆಯ ಬಹುತೇಕ ಭಾಗಗಳಲ್ಲಿ ಮರಣಗುಂಡಿಗಳು ತೆರೆದುಕೊಂಡಿದು ವಾಹನ ಓಡಾಟಕ್ಕೂ ಕಷ್ಟಕರ ಹಾಗೂ ಅಪಾಯಕಾರಿ ಮಾರ್ಗವಾಗಿ ಮಾರ್ಪಟ್ಟಿದ್ದರೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವ ಕುರಿತು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಮಾರ್ಗವಾಗಿ ಓಡಾಡುವ ವಾಹನಗಳು ಮರಣಗುಂಡಿ ತಪ್ಪಿಸುವ ಭರದಲ್ಲಿ ವಾಹನ ಓಡಾಟದ ದಿಕ್ಕನ್ನೇ ಬದಲಾಯಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ವಾಹನ ಅಪಘಾತಕ್ಕೂ ಆಹ್ವಾನಿಸುವಂತಾಗಿದೆ.
ಅಕಾಲಿಕ ಮಳೆ ಹಾಗೂ ಇತರ ಕಾರಣಗಳನ್ನು ಮುಂದಿಟ್ಟು ಅಭಿವೃದ್ಧಿ ಕಾಮಗಾರಿ ನಡೆಸಲು ಹಿಂದೇಟು ಹಾಕುವ ಇಲಾಖಾಧಿಕಾರಿಗಳು ಕೊನೆಪಕ್ಷ ಮರಣಗುಂಡಿ ಮುಚ್ಚುವ ಸತ್ಕಾರ್ಯಕ್ಕೆ ಮುಂದಾಗುವ ಮೂಲಕ ಮುಗ್ನ ಜೀವಗಳು ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ.
ಮರುಡಾಂಬರೀಕರಣ ಕಾಮಗಾರಿ ಶೀಘ್ರ- ಸೋಮಶೇಖರ್, ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಕಾರ್ಕಳ ವಿಭಾಗ ನಲ್ಲೂರು ಕ್ರಾಸ್- ಪಾಜಿಗುಡ್ಡೆ ನಡುವೆ ಹಾದೂ ಹೋಗಿರುವ ರಾಜ್ಯ ಹೆದ್ದಾರಿಯ ಒಂದುವರೆ ಕಿ.ಮೀ ಉದ್ದದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ರೂ. 1.25 ಕೋಟಿ ಅನುದಾನವನ್ನು ಕಾಮಗಾರಿಗಾರಿ ಕಾದಿರಿಸಲಾಗಿದೆ. ಅಕಾಲಿಕ ಮಳೆ ಕ್ಷೀಣಿಸ ಬಳಿಕ ಕಾಮಗಾರಿ ಆರಂಭಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡುವುದೇ ಇಲಾಖೆಯ ಮೂಲ ಉದ್ದೇಶವೂ ಆಗಿದೆ.
ಆರ್.ಬಿ.ಜಗದೀಶ್