ಮಂಗಳೂರು, ನ 01 (DaijiworldNews/SK): ಶೀಘ್ರದಲ್ಲೇ ಕರಾವಳಿಯಲ್ಲೂ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸಿದಲು ಕೆ.ಎಸ್.ಆರ್.ಟಿ.ಸಿ ಮುಂದಾಗಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಿಸುತ್ತಿದ್ದು, ಮೊದಲ ಹಂತವಾಗಿ ಸುಮಾರು 40 ಎಲೆಕ್ಟ್ರಿಕ್ ಬಸ್ ಗಳು ಕರಾವಳಿಯಲ್ಲಿ ಸಂಚರಿಸಲಿದೆ.
ಕೆಲವು ದಿನಗಳ ಹಿಂದೆಯಷ್ಟೇ ಮೊದಲನೇ ಹಂತದಲ್ಲಿ ನಿಗಮ ಸೇರಿದ್ದ ಇವಿ ಪ್ಲಸ್ ಬಸ್ ಗಳ ಕಾರ್ಯಾಚರಣೆಯನ್ನು ಮೈಸೂರು, ವೀರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ರೂಟ್ ಗಳಿಗೆ ಆದ್ಯತೆ ನೀಡಲಾಗಿತ್ತು.ಇದೀಗ ಸದ್ಯದಲ್ಲೇ ಎರಡನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ವೇಳೆ ಮಂಗಳೂರು, ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗಕ್ಕೂ ಎಲೆಕ್ಟ್ರಿಕ್ ಬಸ್ ಗಳು ಹಂಚಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ಎಲೆಕ್ಟ್ರಿಕಲ್ ಬಸ್ ಗಳು ಸಾಮಾನ್ಯವಾಗಿ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 250 ಕಿ.ಮೀ. ಸಂಚರಿಸುತ್ತದೆ. ಅದಕ್ಕೆ ಸಂಬಂಧಿಸಿ ಪೂರಕ ಕೆಲಸಗಳೂ ನಡೆಯುತ್ತಿವೆ. ಎಲೆಕ್ಟ್ರಿಕ್ ಬಸ್ ಗಳ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಈಗಾಗಲೇ ಮಂಗಳೂರಿನಲ್ಲಿ ಜಾಗ ಹುಡುಕಲಾಗುತ್ತಿದ್ದು ಕುಂಟಿಕಾನದಲ್ಲಿರುವ ಮೂರನೇ ಡಿಪೋದಲ್ಲಿ ಮತ್ತು ಬಿಜೈ ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಅದರಂತೆ ಪುತ್ತೂರು ವಿಭಾಗದಲ್ಲಿಯೂ ಜಾಗ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.