ಕುಂದಾಪುರ, ಎ15(SS): ಗಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಕುಂದಾಪುರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರ ತಾಲೂಕಿನ ತಲ್ಲೂರು ಉಪ್ಪಿನಕುದ್ರು ನಿವಾಸಿ ಚಂದ್ರಶೇಖರ್ (43) ಮೃತಪಟ್ಟಿರುವ ದುರ್ದೈವಿ.
ಪೊಲೀಸ್ ಸಿಬ್ಬಂದಿಯಾಗಿದ್ದ ಚಂದ್ರಶೇಖರ್ ಭಾನುವಾರ ಸಂಜೆ ಉಡುಪಿಯಿಂದ ತನ್ನ ಬೈಕಿನಲ್ಲಿ ಕರ್ತವ್ಯ ಮುಗಿಸಿ ಕುಂದಾಪುರಕ್ಕೆ ವಾಪಾಸ್ಸಾಗುತ್ತಿದ್ದರು. ಬ್ರಹ್ಮಾವರ ಸಮೀಪದ ಮಾಬುಕಳ ಸೇತುವೆ ಬಳಿ ಬರುತ್ತಿದ್ದಂತೆ ಹಿಂದುಗಡೆಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದಿಂದ ಬೈಕ್ ರಸ್ತೆ ಬದಿಯ ಡಿವೈಡರ್ಗೆ ಎಸೆಯಲ್ಪಟ್ಟಿದ್ದು, ಚಂದ್ರಶೇಖರ್ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು.
ಇದೇ ವೇಳೆ ಹಿಂದಿನಿಂದ ಕುಂದಾಪುರ ಎಸೈ ಹರೀಶ್ ಹಾಗೂ ಚಾಲಕ ಲೋಕೇಶ್ ಉಡುಪಿ ಕಡೆಯಿಂದ ಬಂದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಚಂದ್ರಶೇಖರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ.
ಚಂದ್ರಶೇಖರ್ 17 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದರು.