ಸುಳ್ಯ, ಎ15(SS): ಮಂಗಳೂರಿನಲ್ಲಿ ಮೋದಿ ಸಭೆಗೆ ಅತ್ಯಧಿಕ ಜನರು ಆಗಮಿಸಿದ್ದಾರೆ ಎನ್ನುವುದು ಸುಳ್ಳು. ರಾಹುಲ್ ಗಾಂಧಿ ಬಂದಿದ್ದಾಗ ಅದಕ್ಕಿಂತ ಅಧಿಕ ಜನರು ಭಾಗವಹಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣ ಕಚೇರಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗಿನಲ್ಲಿ ಒಟ್ಟು 40 ಲಕ್ಷ ಮತದಾರರಿದ್ದು, ಅದರಲ್ಲಿ 40 ಸಾವಿರ ಜನರನ್ನು ಸೇರಿಸುವುದು ದೊಡ್ಡ ಸಂಗತಿ ಅಲ್ಲ. ಮೋದಿಗಿಂತ ರಾಹುಲ್ ಗಾಂಧಿ ಬಂದಿದ್ದಾಗ ಅಧಿಕ ಜನರು ಭಾಗವಹಿಸಿದ್ದರು ಎಂದು ಖಾದರ್ ಹೇಳಿದರು.
ವಿಫಲ ಕೇಂದ್ರ ಸರಕಾರ ಒಂದೆಡೆಯಾದರೆ, ಇನ್ನೊಂದೆಡೆ ವಿಫಲ ಸಂಸದ. ಲೋಕಸಭಾ ಚುನಾವಣೆಯಲ್ಲಿ ಈ ಎರಡನ್ನು ತಿರಸ್ಕರಿಸಿ ಸಮರ್ಥ ಆಡಳಿತ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ನಮಗೆ ಕಷ್ಟಕ್ಕೆ ಸ್ಪಂದಿಸುವವರು ಬೇಕು. ಅಭಿವೃದ್ಧಿ ಕೆಲಸ ಮಾಡುವಂತಹ ಛಲ ಇರುವ ಮಿಥುನ್ ರೈ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಹೇಳಿದರು.
ಸುಳ್ಯದಿಂದಲೇ ಬದಲಾವಣೆಯ ಬಿರುಗಾಳಿ ಪ್ರಾರಂಭವಾಗಿದ್ದು, ಇದನ್ನು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ. ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಈ ರೀತಿಯ ರಾಜಕೀಯ ಗಿಮಿಕ್ಗಳಿಗೆ ಜನರು ಆಸ್ಪದ ನೀಡದೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.