ಮಂಗಳೂರು, ಅ 31 (DaijiworldNews/MS): ದಾಯ್ಜಿವಲ್ಡ್ ಟಿವಿ ಮತ್ತು ಪನಾಮ ಕಾರ್ಪೊರೇಷನ್ ಲಿಮಿಟೆಡ್ ಸಹಯೋಗದಲ್ಲಿ ನ.29 ಭಾನುವಾರದಂದು ಡಾನ್ ಬಾಸ್ಕೊ ಹಾಲ್ನಲ್ಲಿ ತುಳು ಸಂಗೀತ ಕಾರ್ಯಕ್ರಮ ‘ಪದರಂಗಿತ’ ಆದ್ದೂರಿಯಾಗಿ ನಡೆಯಿತು. ತುಳುನಾಡಿನ ಖ್ಯಾತ ಗಾಯಕರಾದ ರವೀಂದ್ರ ಪ್ರಭು, ಪ್ರಕಾಶ್ ಮಹದೇವನ್, ರೂಪ ಪ್ರಕಾಶ್, ಮೊಹಮ್ಮದ್ ಇಕ್ಬಾಲ್, ಸೌಮ್ಯ ಭಟ್, ಸಂದೇಶ್, ತನುಶ್ರೀ ಮತ್ತು ಧಾರಿಣಿ ಹಾಡಿದ ವಿವಿಧ ತುಳು ಗೀತೆಗಳು ಪ್ರೇಕ್ಷಕರ ಮನಸೂರೆಗೊಂಡವು.
ಈ ಸಂದರ್ಭ ಬೀದಿ ಪ್ರಾಣಿಗಳ ರಕ್ಷಕಿಯಾದ ರಜನಿ ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ವಿಜಯ ದಾಂತಿ, ರಂದೀಪ್ ಕಾಂಚನ್, ವಿ4 ನೆಟ್ವರ್ಕ್ನ ಜಿತೇಂದ್ರ ರಾವ್ ಮತ್ತು ತುಳು ಚಲನಚಿತ್ರ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರನ್ನು ದಾಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಅಲೆಕ್ಸಿಸ್ ಕ್ಯಾಸ್ಟೆಲಿನೋ ಸನ್ಮಾನಿಸಿದರು. ಸಂಸ್ಥೆಯ ನಿರ್ದೇಶಕ ಮೆಲ್ವಿನ್ ರೋಡ್ರಿಗಸ್ ಅವರು ಸಾನಿಧ್ಯ ವಸತಿ ಶಾಲೆ ಆಡಳಿತಾಧಿಕಾರಿ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಿದರು.
ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ , " ದಾಯ್ಜಿವಲ್ಡ್ 24X7 2014 ರಲ್ಲಿ ಪ್ರಾರಂಭಿಸಲಾಗಿದ್ದು ಯಶಸ್ವಿಯಾಗಿ ಒಂಬತ್ತು ವರ್ಷಗಳನ್ನು ಪೂರೈಸಿದೆ. ಮುಂದಿನ ವರ್ಷ, ಹತ್ತನೇ ವರ್ಷಕ್ಕೆ ಕಾಲಿರಿಸುತ್ತಿದ್ದು ಇದಕ್ಕಾಗಿ ನಮ್ಮ ಚಾನಲ್ ಮೆಗಾ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ದಾಯ್ಜಿವಲ್ಡ್ ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಎಂಬ ನಾಲ್ಕು ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಒದಗಿಸುವ ಏಕೈಕ ವಾಹಿನಿಯಾಗಿದೆ. ಮಾತ್ರವಲ್ಲದೆ ತಮ್ಮ ಟಿವಿ ಲೋಗೋದಲ್ಲಿ ತುಳು ಲಿಪಿಯನ್ನು ಬಳಸಿದ ಮೊದಲ ಚಾನಲ್ ಆಗಿದೆ. ತುಳುನಾಡಿನ ಅಚ್ಚುಮೆಚ್ಚಿನ ಭಾಷೆ ತುಳು, ಈ ಭಾಷೆಯನ್ನು ಜಾತಿ, ಧರ್ಮದ ಭೇದವಿಲ್ಲ ತುಳುನಾಡಿನವರು ಮಾತನಾಡುತ್ತಾರೆ . ಹೀಗಾಗಿ ನಮ್ಮ ತುಳು ಭಾಷೆಯನ್ನು ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರಿಸಬೇಕು" ಎಂದು ಒತ್ತಾಯಿಸಿದರು.
ನವರಾತ್ರಿ ಹಬ್ಬದ ಪ್ರಯುಕ್ತ ನೂತನ್ ಕ್ಲಾತ್ ಸೆಂಟರ್ ಸಹಯೋಗದಲ್ಲಿ ದಾಯ್ಜಿವರ್ಲ್ಡ್ ಟಿವಿ ಆಯೋಜಿಸಿದ್ದ 'ನವರಂಗಿ ಸೀರೆ ಸ್ಪರ್ಧೆ’ ವಿಜೇತ ತಂಡಗಳಿಗೆ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಲಾರೆನ್ಸ್ ಡಿಸೋಜ , ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ ಲಿ.ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌವ್ರೋ, ಹ್ಯೂಮನ್ ರಿಸೋರ್ಸ್ ಡೈರೆಕ್ಟರ್ ರೊನಾಲ್ಡ್ ನಜರೆತ್ ನಗದು ಬಹುಮಾನಗಳನ್ನು ವಿತರಿಸಿದರು.
ದಾಯ್ಜಿವಲ್ಡ್ ನ ಸ್ಟ್ಯಾನಿ ಬೇಳಾ ಉಪಸ್ಥಿತರಿದ್ದರು.ಇದೇ ವೇಳೆ ಕಲಾಸವ್ಯಸಾಚಿ ತಂಡದ ಪ್ರಶಾಂತ್ ಸಿ ಕೆ, ಸುಂದರ್ ಬಂಗಾಡಿ ಮತ್ತು ಅರ್ಪಿತ್ ಹಾಸ್ಯಪ್ರದರ್ಶನ ನಡೆಸಿಕೊಟ್ಟರು. ರಾಜ್ಗೋಪಾಲ್ ಮತ್ತು ಅವರ ತಂಡ ಇಡೀ ಕಾರ್ಯಕ್ರಮಕ್ಕೆ ಸಂಗೀತ ನೀಡಿತು. ಟೀಮ್ ಅರ್ಬನ್ ಗ್ರೂಪ್ ಕುಲಶೇಖರ್ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಚೇತನ್ ಶೆಟ್ಟಿ ಮತ್ತು ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.