ಉಡುಪಿ, ಎ15(SS): ಕೇಂದ್ರದ ಬಂದರು ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇಂದು ಮಲ್ಪೆ ಮತ್ತು ಬ್ರಹ್ಮಾವರಕ್ಕೆ ಆಗಮಿಸಲಿದ್ದಾರೆ.
ಸಚಿವ ನಿತಿನ್ ಗಡ್ಕರಿಯವರು ಎ.15ರಂದು ಸಂಜೆ 3.30ಕ್ಕೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ, ಮಲ್ಪೆಯ ಪೊಲೀಸ್ ಠಾಣೆ ಸಮೀಪದ ವಡಭಾಂಡೇಶ್ವರದ ಮುಂಭಾಗದ ಮೈದಾನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಸಾರ್ವಜನಿಕ ಸಭೆ ನಡೆಯಲಿದೆ.
ಈ ಸಭೆಗೂ ಮುನ್ನ ಸಂಜೆ 4ಕ್ಕೆ ಕಲ್ಮಾಡಿಯ ಡಾ|ವಿ.ಎಸ್.ಆಚಾರ್ಯರ ಕ್ಲಿನಿಕ್ ಸಮೀಪದಿಂದ ರ್ಯಾಲಿ ನಡೆಯಲಿದೆ. ಈ ಕಾರ್ಯಕ್ರಮವು ಕಾರ್ಯಕರ್ತರಿಗೆ ಹೊಸ ಹುರುಪು ನೀಡಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಮಲ್ಪೆಯ ಗಾಂಧಿ ಶತಾಬ್ದ ಶಾಲಾ ಮೈದಾನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘನವಾಹನದಲ್ಲಿ ಆಗಮಿಸುವವರು ಕಲ್ಮಾಡಿಯ ಡಾ. ವಿ.ಎಸ್.ಆಚಾರ್ಯ ಕ್ಲಿನಿಕ್ ಸಮೀಪ ಇಳಿದು ಮೈದಾನಕ್ಕೆ ಆಗಮಿಸಬೇಕು ಎಂದು ತಿಳಿಸಿದ್ದಾರೆ.
ಬ್ರಹ್ಮಾವರ ಹೆದ್ದಾರಿಯ ಫ್ಲೈಓವರ್ ಅವ್ಯವಸ್ಥೆ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗುವುದು. ಗಡ್ಕರಿಯವರು ಕರಾವಳಿಗೆ ಅನನ್ಯ ಕೊಡುಗೆ ನೀಡಿದ್ದು, ಮುಂದೆ ಕೂಡ ಹಲವಾರು ಕೊಡುಗೆಗಳನ್ನು ನೀಡಲಿದ್ದಾರೆ. ನಿತಿನ್ ಗಡ್ಕರಿಯವರು ಹೆದ್ದಾರಿ ಸಚಿವರಾಗಿ ರಾ.ಹೆ.ಯ ಆದಿ ಉಡುಪಿ - ಮೊಳಕಾಲ್ಮೂರು ರಸ್ತೆಗೆ 660 ಕೋ.ರೂ. ಈಗಾಗಲೇ ಮಂಜೂರು ಮಾಡಿದ್ದಾರೆ. ಅದರಲ್ಲಿ 95 ಕೋ.ರೂ. ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಗೊಂಡಿದೆ. ಆದಿಉಡುಪಿ, ಮಲ್ಪೆ ಹೆದ್ದಾರಿ ಅಭಿವೃದ್ಧಿಗೆ 40 ಕೋ.ರೂ. ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.