ಬೆಂಗಳೂರು, ಏ 15 (MSP): 2018-19ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮಧ್ಯಾಹ್ನ 12ಗಂಟೆಗೆ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಉಡುಪಿ ಜಿಲ್ಲೆ ಪ್ರಥಮ (92.20%), ದಕ್ಷಿಣ ಕನ್ನಡ ದ್ವಿತೀಯ ಸ್ಥಾನ (90.91%), ಕೊಡಗು ತೃತೀಯ (83.31%) ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಕೊನೆಯ ಸ್ಥಾನ (51.42%) ಪಡೆದುಕೊಂಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಶೇ.68.24 ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದು, ಬಾಲಕರು ಶೇ.55.29ರಷ್ಟು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 61.73 ಫಲಿತಾಂಶ ಬಂದಿದೆ.ಈ ವರ್ಷ 6,71,653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 4,14, 587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 56.58%ರಷ್ಟು, ವಾಣಿಜ್ಯ ಶೇಕಡಾ 66.39% ಮತ್ತು ಕಲಾ ವಿಭಾಗದಲ್ಲಿ ಶೇಕಡಾ 50.53%ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉನ್ನತ ಶ್ರೇಣಿಯಲ್ಲಿ 54,823 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.